ADVERTISEMENT

ಬಯೋಮೆಟ್ರಿಕ್ ನೋಂದಣಿ: ಹಣ ವಸೂಲಿ ಆರೋಪ!

ಮದ್ದೂರು ತಾಲ್ಲೂಕಿನ ಯಡಗನಹಳ್ಳಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:49 IST
Last Updated 12 ಡಿಸೆಂಬರ್ 2012, 9:49 IST

ಮಂಡ್ಯ: ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ಗಾಗಿ ಮಾಡುವ ಬಯೋಮೆಟ್ರಿಕ್ ನೋಂದಾವಣೆ ಸಂಪೂರ್ಣ ಉಚಿತ. ಆದರೆ ಬಯೋಮೆಟ್ರಿಕ್‌ಗೆ ಮಾಹಿತಿ ನೀಡಲು ಹೋದವರಿಂದ ಹಣ ವಸೂಲಿ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಹಣ ಕೊಟ್ಟು ಮೋಸ ಹೋದವರಲ್ಲಿ ಅನಕ್ಷರಸ್ಥರಷ್ಟೇ ಅಲ್ಲ. ವಿದ್ಯಾವಂತವರೂ ಸೇರಿದ್ದಾರೆ..! ಹೀಗೆ, ಅವರಿಂದ ಹಣ ವಸೂಲಿ ಮಾಡಿರುವುದು 5 ಅಥವಾ 10 ರೂ. ಅಲ್ಲ. ಸೇವಾ ಶುಲ್ಕದ ಹೆಸರಿನಲ್ಲಿ ಬರೋಬ್ಬರಿ ರೂ. 100 ವಸೂಲು ಮಾಡಿದ ಆರೋಪವಿದೆ.
ಇಂಥ ಆರೋಪಗಳು ಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ `ಪ್ರಜಾವಾಣಿ' ಮದ್ದೂರು ತಾಲ್ಲೂಕು ಯಡಗನಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದಾಗ, ಆ ಗ್ರಾಮದ ವೈ.ಬಿ.ಮನುಕುಮರ್, ನಂದೀಶ್, ಕೃಷ್ಣ ಸೇರಿದಂತೆ ಹಲವರು, ತಮ್ಮಿಂದ ಹಣ ವಸೂಲು ಮಾಡಲಾಗಿದೆ ಎಂದು ಪೈಪೋಟಿಯಲ್ಲಿ ಅಳಲು ತೋಡಿಕೊಂಡರು.

`ನಾವಷ್ಟೇ ಅಲ್ಲ, ನಮ್ಮೂರಿನ ಹಲವರು ಹಣ ನೀಡಿಯೇ ಬಯೋಮೆಟ್ರಿಕ್‌ಗೆ ನೋಂದಣಿ ಮಾಡಿದ್ದಾರೆ. ಹಣ ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಹಣ ಕೊಟ್ಟರಷ್ಟೇ, ಬಯೋಮೆಟ್ರಿಕ್‌ಗೆ ಮಾಹಿತಿ ಪಡೆಯುತ್ತೇವೆ. ಇಲ್ಲದಿದ್ದರೆ, ಇಲ್ಲ ಎಂದ್ರು. ಅದಕ್ಕಾಗಿ ಹಣ ಕೊಟ್ವಿ. ಅಂದ್ಹಾಗೆ, ಎಲ್ಲರಿಂದಲ್ಲೂ ಹಣ ಪಡೆದಿಲ್ಲ. ಯಾರ‌್ಯಾರ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲವೋ ಅಂಥವರಿಂದ ಹಣ ಪಡೆದ್ವ್ರೆ. ಹಣ ನೀಡಬಾರದಿತ್ತೇ' ಎಂದು ನಮ್ಮನ್ನೇ ಪ್ರಶ್ನಿಸಿದರು.

`ನಮ್ಮ ಮನೆಯ ಮೂರ್ ಜನ್ದ ಹೆಸ್ರು ಲಿಸ್ಟ್‌ನಲ್ಲಿ ಇರ್ಲಿಲ್ಲ. ಹೆಸ್ರು ಸೇರ್ಪಡೆ ಮಾಡ್‌ಬೇಕಂದ್ರೆ 100 ರೂಪಾಯಿ ಕೊಡ್‌ಬೇಕೇಂದ್ರು. ಯ್ಯಾಕೆ ? ಎಂದು ದಬಾಯಿಸ್ದೆ. ಹೆಸ್ರು ಸೇರ್ಪಡೆಗೆ ಅಂದ್ರು. ಇಂದು, ನಾಳೆ ಎಂದೆಲ್ಲಾ ಸತಾಯಿಸದ್ರು. ಕಡೇ ದಿನ 100 ಕೊಟ್ಟು ಅಪ್ಪ, ಅವ್ವ ಮತ್ತು ನನ್ ಹೆಸ್ರು ಸೇರಿಸ್ದೆ. ಹಣ ಕೊಟ್ಟಿದ್ದಕ್ಕೆ ಅವ್ರ ರಶೀದಿನೂ ಕೊಡ್‌ಲಿಲ್ಲ' ಎಂದು ವೈ.ಬಿ.ಮನುಕುಮಾರ್ ಪ್ರತಿಕ್ರಿಯಿಸಿದರು.

ಗ್ರಾಮದ ತಿಮ್ಮೇಗೌಡರ ಪ್ರಕಾರ, `ಅಯ್ಯೋ ಸಾ ಇಲ್ಲಿ ಅವಿದ್ಯಾವಂತ್ರೆ ಅಷ್ಟೇ ಅಲ್ಲ, ವಿದ್ಯಾವಂತ್ರೂ ಹಣ ಕೊಟ್ಟು ಮೋಸ ಹೋಗಾವ್ರೆ. ನಮ್ಮ ಅಣ್ಣ-ಅತ್ತಿಗೆ ಕೂಡ ತಲಾ 100 ರೂ. ಕೊಟವ್ರೆ. ನಾವಷ್ಟೇ ಅಲ್ಲ, ಊರ್‌ನಾಗೆ ಬಹಳಷ್ಟು ಮಂದಿ ಹಣ ಕೊಟ್ಟವ್ರೆ ಸಾ. ಅವ್ರ ಹಣ ಪಡ್‌ದಿಲ್ಲ ಅನ್ನೋದು ಸುಳ್ಳು ಸಾ..' ಎಂದು ಹೇಳಿದರು.

ಹಣ ಪಡೆದಿಲ್ಲ: ಇಲ್ಲಿನ ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನ. 24 ರಿಂದ ಡಿ. 10ರ ವರೆಗೆ ಬಯೋಮೆಟ್ರಿಕ್‌ಗೆ ಮಾಹಿತಿ ಪಡೆದಿದ್ದು ಈ ಕಾರ್ಯವನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿತ್ತು. ಅದರಂತೆ ಮೂವರು ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಗ್ರಾಮದಲ್ಲಿ ಸುಮಾರು 1,800 ಜನಸಂಖ್ಯೆ ಇದ್ದು, ಬಹುತೇಕರ ಹೆಸರನ್ನು ನೋಂದಣಿ ಮಾಡಲಾಗಿದೆ. ಕೆಲವರ ಮಾಹಿತಿಯನ್ನು ಮುಂದಿನ ಬಾರಿ ಮಾಡುತ್ತೇವೆಂದು ನಿರಾಕರಿಸಿರುವ ಬಗೆಗೂ ಇಲ್ಲಿನ ಜನರು ದೂರುತ್ತಾರೆ.

ಹಣ ವಸೂಲಿ ಆರೋಪದ ಬಗೆಗೆ ಈ ಸಿಬ್ಬಂದಿಯನ್ನು ಪ್ರಶ್ನಿಸಿದ್ದಕ್ಕೆ, ಕೆಲಕಾಲ ವಿಚಲಿತರಾದಂತೆ ಕಂಡು ಬಂದ ಅವರು, `ಸಾರ್, ನಾವ್ಯಾರೂ ಹಣ ಪಡೆದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಎಂಥಾ ಆರೋಪ ಸರ್, ನಿಜವಾಗ್ಲೂ ಬೇಜಾರ್ ಆಗುತ್ತೆ' ಎನ್ನುವ ಮೂಲಕ ತಮ್ಮನ್ನು ಬಲವಾಗಿಯೇ ಸಮರ್ಥಿಸಿಕೊಂಡರು.

ಆ ವೇಳೆಗಾಗಲೇ, ಬಯೋಮೆಟ್ರಿಕ್‌ಗೆ ಮಾಹಿತಿ ಪಡೆಯಲು ತಂದಿದ್ದಂಥ ಉಪಕರಣಗಳನ್ನು ಆಟೋ ಒಂದಕ್ಕೆ ತುಂಬುತ್ತಿದ್ದ ಅವರು, `ನಮಗೆ ಗೊತ್ತುಪಡಿಸಿದ್ದ ಅವಧಿ ಪೂರ್ಣಗೊಂಡಿದೆ. ಹೀಗಾಗಿ ತೆರಳುತ್ತಿದ್ದೇವೆ' ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮಾತನಾಡಿ, `ಹಣ ವಸೂಲಿ ಮಾಡಿದ್ದಾರೆ ಎಂಬುದು ಸುಳ್ಳು ಸಾರ್. ನಮ್ ಜನಕ್ಕೆ ಒಳ್ಳೇದು ಆಗ್ಬೇಕು ಅಂಥ, ನಾನೇ ಎಷ್ಟೊಂದು ಜನರ ಬಯೋಮೆಟ್ರಿಕ್ ತೆಗೆಸಿದ್ದೀನಿ. ಇದನೆಲ್ಲಾ ನಂಬ್‌ಬೇಡಿ. ಯಾರೋ ನಿಮ್ಗೆ ಸುಳ್‌ಸುದ್ದಿ ಕೊಟ್ಟಾವ್ರೆ ಸರ್..' ಎಂದು ಪ್ರತಿಕ್ರಿಯಿಸಿದರು.

ಏನಿದು ಬಯೋಮೆಟ್ರಿಕ್?
ಸರ್ಕಾರದ ಯೋಜನೆಗಳನ್ನು ಗ್ರಾಮಗಳಿಗೆ ತಲುಪಿಸುವಲ್ಲಿ ಜನಸಂಖ್ಯಾ ನೋಂದಣಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಮಾಹಿತಿ ಸಂಗ್ರಹ ಅಭಿಯಾನ ಜಿಲ್ಲೆಯಲ್ಲೆಡೆ ನಡೆಯುತ್ತಿದೆ.

ಜನಸಂಖ್ಯೆ, ಕುಟುಂಬದ ಸಂಖ್ಯೆಯನ್ನು ಆಧಾರಿಸಿ ಯೋಜನಾ ಆಯೋಗವು ಯೋಜನೆಗಳನ್ನು ರೂಪಿಸುತ್ತದೆ. ನಿಖರವಾದ ಮಾಹಿತಿಯನ್ನು ನೀಡಿದರೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗುತ್ತದೆ ಎಂಬುದು ಬಯೋಮೆಟ್ರಿಕ್ ಮಾಹಿತಿ ಸಂಗ್ರಹ ಅಭಿಯಾನದ ಹಿಂದಿನ ಉದ್ದೇಶ.

ಭಾವಚಿತ್ರ, ಬೆರಳು ಗುರುತು ಮತ್ತು ಕಣ್ಣುಗಳ ಚಿತ್ರಗಳನ್ನು ಸೆರೆಹಿಡಿದು ಮಾಹಿತಿ ಸಂಗ್ರಹಿಸಲಾಗುತ್ತದೆ. ಬಳಿಕ, ರಾಷ್ಟ್ರೀಯ ಗುರುತಿನ ಚೀಟಿಯನ್ನು ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.

ಇದು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಹಣ ನೀಡುವಂತೆ ಒತ್ತಾಯಿಸಿದರೆ, ಈ ಸಂಬಂಧ ಆಯಾಯ ತಾಲ್ಲೂಕಿನ ತಹಶೀಲ್ದಾರ್‌ಗೆ ಲಿಖಿತವಾಗಿ ದೂರ ನೀಡಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.