ADVERTISEMENT

ಬರ ಪರಿಸ್ಥಿತಿ ಎದುರಿಸಲು ಸರ್ಕಾರ ವಿಫಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:55 IST
Last Updated 8 ಅಕ್ಟೋಬರ್ 2011, 9:55 IST

ಮಂಡ್ಯ:  ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಿಸಲು ಸರ್ಕಾರ ವಿಫಲವಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಹಾಗೂ ಉದ್ಯೋಗ  ಸೃಷ್ಟಿ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಬರ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ಉಲ್ಲೇಖಿಸಿದ ಅವರು, ಸರ್ಕಾರ ಹಣವನ್ನೇ ಬಿಡುಗಡೆ ಮಾಡದೇ ಇದ್ದರೆ ಏನು ಕಾಮಗಾರಿ ಮಾಡುತ್ತೀರಿ? ಕೊಳವೇ ಬಾವಿ ಹೇಗೆ ಕೊರೆಸುತ್ತೀರಿ ಎಂದು ಪ್ರಶ್ನಿಸಿದರು.

ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಆಯಾ ಶಾಸಕರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆ ಸಭೆ ನಡೆಸಿ ಮಾಹಿತಿ ಪಡೆಯಬೇಕು ಎಂದರು.

ಬರಪರಿಸ್ಥಿತಿ ಮತ್ತು ಪರಿಹಾರ ಕಾಮಗಾರಿಗಳ ವಿವರ ಪಡೆಯಲು ಮಂಡ್ಯ ಜಿಲ್ಲೆಯೇ ಅಲ್ಲದೆ ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರ,  ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು ಎಂದರು.

ವಿದ್ಯುತ್ ಸಮಸ್ಯೆ, ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಆಗಿರುವ ವೈಫಲ್ಯ ಅಂಶಗಳನ್ನು ಉಲ್ಲೇಖಿಸಿ, ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ ವಿಪಕ್ಷ ನಾಯಕರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಜಾಫರ್ ಅವರು, ಸದಸ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ಪರಿಹಾರ ನಿಧಿ (ಸಿಆರ್‌ಎಫ್) ಅನ್ವಯ 1 ಕೋಟಿ ರೂಪಾಯಿ ಲಭ್ಯವಿದೆ ಎಂದರು.

ಜಿಪಂ ಸಿಇಒ ಜಯರಾಂ ಅವರು,  ಜಿಲ್ಲೆಯಲ್ಲಿ ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ಇಲ್ಲ ಎಂದರು. ಆದರೆ, ಇದನ್ನು ಹಾಜರಿದ್ದ ಶಾಸಕ ಸುರೇಶ್‌ಗೌಡ ಅವರೇ ತಳ್ಳಿಹಾಕಿದರು. ನಾಗಮಂಗಲದಲ್ಲಿಯೇ ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಸ್ಥಿತಿ ಇದೆ. ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ. ಕೆಲ ನೀರು ಪೂರೈಕೆ ಯೋಜನೆಗಳ ಅನುಷ್ಠಾನವು ವಿಳಂಬವಾಗಿದೆ. ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಟೀಕಿಸಿದರು.

ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ್, ಮಜ್ದೂರ್ ಘಟಕದ ಡಿ.ಸುದರ್ಶನ್, ಮಹಿಳಾ ಘಟಕದ ಶುಭದಾಯಿನಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ವಿವಿಧ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.