ಮಂಡ್ಯ: ರಾಜ್ಯದ ವಿವಿಧೆಡೆ ಕಂಡುಬಂದಿರುವ ಬರ ಪರಿಸ್ಥಿತಿಯನ್ನು ಪಕ್ಷಗಳು ತಮ್ಮ ರಾಜಕೀಯ ಏಳಿಗೆಗಾಗಿ ಬಳಸಿಕೊಳ್ಳುತ್ತಿವೆ. ಇನ್ನೊಂದೆಡೆ ಅಧಿಕಾರರೂಢ ಬಿಜೆಪಿ ಕೂಡಾ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವಿಫಲವಾಗಿದೆ ಎಂದು ಪ್ರಾಂತ ರೈತ ಸಂಘದ ಮುಖಂಡ ಕೆ.ಸಿ.ಭಯ್ಯಾರೆಡ್ಡಿ ಅವರು ಟೀಕಿಸಿದರು.
ಸರ್ಕಾರಿ ಗೋಮಾಳ ಗುಂಡು ತೋಪು, ಬಂಜರು ಭೂಮಿ, ಸಿ ಮತ್ತು ಡಿ ಭೂಮಿ ಇತ್ಯಾದಿ ಹೆಸರಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಹಕ್ಕುಗಳನ್ನು ಸಕ್ರಮ ಮಾಡಬೇಕು ಎಂದು ಒತ್ತಾಯಿಸಲು ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ ಆಯೋಜಿಸಿರುವ ಜಾಥಾಗೆ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಬರ ಪರಿಸ್ಥಿತಿ ಮತ್ತು ಅದನ್ನು ನಿಭಾಯಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ ಅವರು, ಈ ಸ್ಥಿತಿಯಲ್ಲಿ ನೊಂದವರಿಗೆ ಪರಿಹಾರ ಒದಗಿಸಲು ಪಕ್ಷಗಳು ಮುಂದಾಗಬೇಕಿತ್ತು. ಆದರೆ, ಎಲ್ಲ ಪಕ್ಷಗಳು ಬರ ಅಧ್ಯಯನದ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗುತ್ತಿವೆ ಎಂದರು.
ಸರ್ಕಾರ ಕೂಡಾ ಪರಿಹಾರ ನೀಡುವುದಾಗಿ ಘೋಷಣೆಯನ್ನು ಮಾಡಿದ್ದು, ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಪಡಿತರ ವ್ಯವಸ್ಥೆಯಲ್ಲಿ ಲೋಪವಾಗಿದೆ. ದಲಿತರ ಕಾಲೋನಿಗಳ ಅಭಿವೃದ್ಧಿ, ಹಕ್ಕುಪತ್ರ ವಿತರಣೆ ಮತ್ತಿತರ ಬೇಡಿಕೆಗಳು ನೆನೆಗುದಿಯಲ್ಲಿಯೇ ಇವೆ ಎಂದು ತಿಳಿಸಿದರು.
ಸರ್ಕಾರದ ಈ ಜನವಿರೋಧಿ ಕಾರ್ಯಗಳನ್ನು ಪ್ರತಿಭಟಿಸಲು ಮತ್ತು ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈಗ ವಿವಿಧ ಐದು ಕಡೆಯಿಂದ ಜನಜಾಗೃತಿ ಜಾಥಾ ಆರಂಭವಾಗಿದೆ. ಈ ಭಾಗದ ಜಾಥಾವು ಬೆಂಗಳೂರು ನಗರ, ರಾಮನಗರ, ತುಮಕೂರು, ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಪುಟ್ಟಮಾಧು, ಸಿ.ಕುಮಾರಿ, ಟಿ.ಯಶವಂತ್, ಪ್ರಾಂತ ರೈತಸಂಘದ ಟಿ.ಎಲ್.ಕೃಷ್ಣೇಗೌಡ ಅವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.