ADVERTISEMENT

ಬಸವನಹಳ್ಳಿಗೆ ಕಾಡಾನೆಗಳ ಕಾಟ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:28 IST
Last Updated 4 ಡಿಸೆಂಬರ್ 2013, 6:28 IST

ಮಳವಳ್ಳಿ: ನೆಲಮಟ್ಟದಿಂದ ನೂರಾರು ಅಡಿಗಳ ಎತ್ತರ ಹಾಗೂ ಕಾಡು ಪ್ರಾಣಿಗಳು ಇರುವ  ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮವೇ ಬಸವನಹಳ್ಳಿ.

ತಾಲ್ಲೂಕಿನ ಹಲಗೂರು ಹೋಬಳಿಯ ಎಚ್‌. ಬಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಅಂದಾಜು 200 ಕುಟುಂಬಗಳಿದ್ದು, 800 ಮಂದಿ ವಾಸವಾಗಿದ್ದಾರೆ.

ಕುಡಿಯುವ ನೀರು, ವಿದ್ಯುತ್‌ ಸಮಸ್ಯೆಗಿಂತ ಹೆಚ್ಚಾಗಿ ಇವರನ್ನು ಕಾಡುಪ್ರಾಣಿಗಳ ಹಾವಳಿ ಹೆಚ್ಚು ಕಾಡುತ್ತದೆ.  ದಟ್ಟ ಅರಣ್ಯ ಪ್ರದೇಶವಾಗಿದ್ದು, ಆನೆಗಳು ಹೆಚ್ಚಾಗಿ ಇಲ್ಲಿ ಕಂಡು ಬರುತ್ತವೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಇವರ, ಬೆಳೆಯನ್ನು ಆಗಾಗ ಬಂದು ನಾಶ ಮಾಡುತ್ತಲೇ ಇರುತ್ತವೆ. ಕೋತಿಗಳ ಕಾಟವೂ ಹೆಚ್ಚಾಗಿಯೇ ಇದೆ.

ಗ್ರಾಮದಲ್ಲಿ ಇರುವ ಪರಿಶಿಷ್ಟ ಕಾಲೊನಿಯ ರಸ್ತೆ ಮಾತ್ರ ಸಿಮೆಂಟ್‌ ಕಂಡಿದ್ದು, ಉಳಿದ ರಸ್ತೆಗಳು ಹಾಳಾಗಿ ಹೋಗಿವೆ. ಸಂಚರಿಸಲು ತೊಂದರೆ ಪಡಬೇಕಾದ ಸ್ಥಿತಿ ಇದೆ.

ಗ್ರಾಮಕ್ಕೆ ಮಿನಿ ಕುಡಿಯುವ ನೀರು ಯೋಜನೆ ಒದಗಿಸಲಾಗಿದ್ದು,  ಕೈ ಕೊಡುವ ವಿದ್ಯುತ್‌್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ತೊಂದರೆ ಎದುರಾಗುವುದೂ ಉಂಟು.

ಗ್ರಾಮವನ್ನು ಸಂಪರ್ಕಿಸುವ ರಸ್ತೆ ಡಾಂಬರೀಕರಣವಾದ ಮೇಲೆ ಗ್ರಾಮಕ್ಕೆ ಬಸ್‌ ಸಂಚಾರವೂ ಆರಂಭವಾಗಿದೆ. ಆದರೆ, ಬೆಳಿಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಸಮಯದಲ್ಲಿ ಬಸ್‌ ಇಲ್ಲ ಎನ್ನುವ ದೂರು ಗ್ರಾಮಸ್ಥರದ್ದಾಗಿದೆ.

ಮುತ್ತತ್ತಿ, ಬಸವನಬೆಟ್ಟದ ಮೀಸಲು ಅರಣ್ಯ ಪ್ರದೇಶದಿಂದ ನುಗ್ಗುವ ಆನೆಗಳು ಬೆಳೆಗಳನ್ನು ನಾಶ ಮಾಡುವುದರಿಂದ ವರ್ಷಪೂರ್ತಿ ಮಾಡಿದ ಶ್ರಮ ಕ್ಷಣ ಹೊತ್ತಿನಲ್ಲಿ ಹಾಳಾಗಿ ಹೋಗುತ್ತಿದೆ. ಆನೆಗಳ ದಾಳಿಯಿಂದ ಬೆಳೆಯನ್ನು ರಕ್ಷಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಗ್ರಾಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಉಳಿದವರಿಗೆ ಬಯಲೇ ಗತಿ. ಆರೋಗ್ಯ ಉಪಕೇಂದ್ರ, ಸ್ಮಶಾನ, ಗಿರಣಿ ಮಿಲ್‌ ಯಾವುದೂ ಇಲ್ಲ, ಅವುಗಳಿಗಾಗಿ ಗ್ರಾಮ ಪಂಚಾಯಿತಿ ಕೇಂದ್ರವನ್ನು ಅವಲಂಬಿಸಬೇಕಾಗಿದೆ. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಕಾಡು ಪ್ರಾಣಿಗಳ ದಾಳಿಯ ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ. ಬೀದಿ ದೀಪಗಳ ನಿರ್ವಹಣೆಯೂ ಚೆನ್ನಾಗಿಲ್ಲ. ಇವುಗಳನ್ನು ಸರಿಪಡಿಸಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.