ADVERTISEMENT

`ಬಾಲಕಾರ್ಮಿಕ ಪದ್ದತಿ- ಮಕ್ಕಳ ರಕ್ಷಿಸಿ'

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 6:01 IST
Last Updated 13 ಜೂನ್ 2013, 6:01 IST

ಕೃಷ್ಣರಾಜಪೇಟೆ : ಬಡತನ ಮತ್ತು ಅನಕ್ಷರತೆಗಳಿಂದಾಗಿ ಇಂದಿಗೂ ಸಮಾಜವನ್ನು ಬಾಲಕಾರ್ಮಿಕ ಪದ್ದತಿ ಸೇರಿದಂತೆ ವಿವಿಧ ಕಂಟಕಗಳು ಬಾಧಿಸುತ್ತಿದ್ದು, ಸಮಾಜವನ್ನು ಇವುಗಳಿಂದ ಪಾರು ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಪಟ್ಟಣದ ಹಿರಿಯ ಶ್ರೇಣಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಗೋಪಾಲಪ್ಪ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಂದರವಾದ ಬಾಲ್ಯವನ್ನು ಅನುಭವಿಸಬೇಕಾದ ಪುಟ್ಟ ಮಕ್ಕಳು ತಮ್ಮ ಕೌಟುಂಬಿಕ ಸಮಸ್ಯೆಗಳಿಂದಾಗಿ ಆದಾಯ ತರುವ ಮೂಲವಾಗಬೇಕಾಗಿರುವುದು ವಿಷಾದನೀಯ.

ಬಹಳಷ್ಟು ಕುಟುಂಬಗಳು ಅನಕ್ಷರತೆ ಹಾಗೂ ಬಡತನದ ಕಾರಣದಿಂದ ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿದ್ದಾರೆ. ಅಲ್ಲದೆ ಕೆಟ್ಟ ಚಾಳಿಗಳನ್ನು ಹೊಂದಿರುವ ಪೋಷಕರು ಸಹ ಇಂತಹ ಕುಕೃತ್ಯಕ್ಕೆ ಮುಂದಾಗಿದ್ದಾರೆ. ಇಂತಹ ಅನಿಷ್ಟ ಪದ್ದತಿಗಳಿಂದ ಪುಟ್ಟ ಮಕ್ಕಳನ್ನು ಪಾರುಮಾಡಿ ಅವರಿಗೆ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ನ್ಯಾಯಾಧೀಶರಾದ ಶ್ರೀಧರ್ ಚಿಕ್ಕ ವಯಸ್ಸಿನ ಮಕ್ಕಳನ್ನು ದುಡಿಮೆಗೆ ಹಚ್ಚದೆ ಅವರ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ಅನಂತರಾಮಯ್ಯ, ಉಪಾಧ್ಯಕ್ಷ ಎನ್.ಆರ್. ರವಿಶಂಕರ್, ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ, ಹಿರಿಯ ವಕೀಲರಾದ ಬಿ.ಎಂ. ಚಂದ್ರಶೇಖರಯ್ಯ, ಎಂ.ಎಲ್. ಸುರೇಶ್, ಬಂಡಿಹೊಳೆ ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.