ADVERTISEMENT

ಬಿಎಸ್‌ಎನ್‌ಎಲ್ ನೌಕರರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 4:45 IST
Last Updated 16 ಅಕ್ಟೋಬರ್ 2012, 4:45 IST

ಮಂಡ್ಯ: ಭಾರತೀಯ ದೂರಸಂಪರ್ಕ ಸೇವಾ ಕ್ಷೇತ್ರದಲ್ಲಿ (ಐಟಿಎಸ್) ಎರವಲು ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬಿಎಸ್‌ಎನ್‌ಎಲ್ ಕಂಪೆನಿಯಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿ ಬಿಎಸ್‌ಎನ್‌ಎಲ್ ಅಧಿಕಾರಿಗಳ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮುಖ್ಯ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಕಾರರು ಎರವಲು ಸೇವೆಯನ್ನು ರದ್ದುಗೊಳಿಸಿ ಅವರ ಕೆಲಸವನ್ನು ಕಂಪೆನಿಯಲ್ಲಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.

ವಿಲೀನಗೊಳ್ಳಲು ಇಷ್ಟವಿಲ್ಲದ ಅಧಿಕಾರಿಗಳನ್ನು ಅವರ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು. ಅಲ್ಲದೆ, ಈಗಾಗಲೇ ಕಂಪೆನಿಯಲ್ಲಿ ವಿಲೀನಗೊಂಡಿರುವ ಅಧಿಕಾರಿಗಳು ಮತ್ತು ಅಧಿಕಾರೇತರ ನೌಕರರನ್ನೂ ಸಹ ದೂರ ಸಂಪರ್ಕ ಇಲಾಖೆಗೆ ವಾಪಸ್ಸು ಕಳುಹಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಎನ್‌ಎಲ್ ಕಂಪೆನಿ ಆರಂಭಗೊಂಡ ಬಳಿಕ, ದೂರಸಂಪರ್ಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 3.5 ಲಕ್ಷ ಅಧಿಕಾರಿಗಳು/ಅಧಿಕಾರೇತರ ನೌಕರರನ್ನು ವಿಲೀನಗೊಳಿಸಲಾಯಿತು. ಆದರೆ, ಗ್ರೂಪ್ `ಎ~ ಅಧಿಕಾರಿಗಳಾದ ಐಟಿಎಸ್ ಅಧಿಕಾರಿಗಳನ್ನು ಕಂಪೆನಿಯಲ್ಲಿ ವೀಲಿನಗೊಳಿಸದೇ ಎರವಲು ಸೇವೆಯ ಮೇಲೆ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ಇದು, ಕಂಪೆನಿಯ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಕೇಂದ್ರ ಸರ್ಕಾರ ಈ ಬಗೆಗೆ ಸಬೂಬು ಹೇಳದೆ, ತತ್‌ಕ್ಷಣ ಐಟಿಎಸ್ ಅಧಿಕಾರಿಗಳನ್ನು ಬಿಎಸ್‌ಎನ್‌ಎಲ್‌ನಲ್ಲಿ ವಿಲೀನಗೊಳಿಸಬೇಕು. ಇಲ್ಲದಿದದಲ್ಲಿ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಶ್ರೀನಿವಾಸ, ಕೃಷ್ಣ, ಮೇಲಣ್ಣನವರ್, ರಾಮೇಗೌಡ, ಜಯರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.