ನಾಗಮಂಗಲ: ಸೋಮವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆ ಹಾಗೂ ಬಿರುಗಾಳಿಗೆ ಮನೆಗಳ ಮೇಲ್ಛಾವಣಿ ಹಾರಿ, ಬೃಹತ್ ಮರ ನೆಲಕ್ಕುರುಳಿವೆ. ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿರುವ ಘಟನೆ ತಾಲ್ಲೂಕಿನ ಹಿಂಡಸಹಳ್ಳಿ ಗ್ರಾಮದಲ್ಲಿ ಜರುಗಿದೆ.
ಯೋಗೇಶ್ ಎಂಬುವವರ ಮನೆಯ ಮೇಲ್ಭಾಗಕ್ಕೆ ಹೊದಿಸಿದ್ದ ಕಲ್ನಾರು ಶೀಟು ಕೂಡ ರಭಸಕ್ಕೆ ಹಾರಿಹೋಗಿದೆ. ಆಲಿಕಲ್ಲು ಬಿದ್ದ ರಭಸಕ್ಕೆ ಕಲ್ನಾರು ಶೀಟು ಒಡೆದು ಮನೆಯಲ್ಲಿದ್ದ 15 ಕ್ವಿಂಟಾಲ್ ಹಾಗೂ ಶಂಕರೇಗೌಡ ಎಂಬುವವರ ಮನೆಯಲ್ಲಿದ್ದ 10 ಕ್ವಿಂಟಾಲ್ ರಾಗಿ ನೆನೆದು ಹೋಗಿದೆ.
ರಾಜೇಗೌಡ ಎಂಬುವವರಿಗೆ ಸೇರಿದ 10 ತೆಂಗಿನ ಮರ, ನಿಂಗರಾಜೇಗೌಡ ಎಂಬುವವರ 7 ತೆಂಗಿನಮರ, 1 ಹುಲ್ಲಿನ ಮೆದೆ, ಓದೇಗೌಡ ಎಂಬುವವರ 8 ತೆಂಗಿನ ಮರ, 1 ಬೃಹತ್ ಮಾವಿನ ಮರ, ಜಯರಾಮೇಗೌಡ ಎಂಬುವವರಿಗೆ ಸೇರಿದ 1 ಬಿಲ್ವದ ಮರ ಹಾಗೂ ಗ್ರಾಮದ ಸುತ್ತಮುತ್ತ ಇದ್ದ 10 ಕ್ಕು ಹೆಚ್ಚು ಹಲಸಿನ ಮರಗಳು ನೆಲಕಚ್ಚಿವೆ.
ರಾಮಸ್ವಾಮಿ ಎಂಬುವವರಿಗೆ ಸೇರಿದ ಸೀಮೆ ಬದನೆ ಕಾಯಿ ಗಿಡ ಹಾಗೂ ಕಾರ್ತಿಕ್ ಬೆಳೆದಿದ್ದ ಟೊಮೆಟೊ ಸಸಿಗಳು ಸಂಪೂರ್ಣ ನೆಲಕಚ್ಚಿವೆ. ಗ್ರಾಮದ 40ಕ್ಕೂ ಹೆಚ್ಚು ಹುಲ್ಲಿನ ಮೆದೆಗಳು ಗಾಳಿಯ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿದೆ.
ರಾಜಸ್ವ ನಿರೀಕ್ಷಕ ವೆಂಕಟರಂಗಯ್ಯ, ಗ್ರಾಮ ಲೆಕ್ಕಾಧಿಕಾರಿ ಲೋಹಿತ್, ಬೋಗಾದಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯುವ ಮುಖಂಡ ಸೋಮು ಹಾಗೂ ಸ್ನೇಹಿತರು ಅಳಿದುಳಿದ ಹುಲ್ಲಿನ ಕಟ್ಟುಗಳನ್ನು ಹುಡುಕಿ ತಂದು ಜೋಡಿಸುವಲ್ಲಿ, ತೆಂಗಿನ ತೋಟದಲ್ಲಿ ಗರಿಗಳನ್ನು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.