ADVERTISEMENT

ಬೆಳೆಸಾಲ ಮನ್ನಾ ಮಾಡಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 8:40 IST
Last Updated 28 ಜೂನ್ 2012, 8:40 IST
ಬೆಳೆಸಾಲ ಮನ್ನಾ ಮಾಡಲು ರೈತರ ಆಗ್ರಹ
ಬೆಳೆಸಾಲ ಮನ್ನಾ ಮಾಡಲು ರೈತರ ಆಗ್ರಹ   

ಪಾಂಡವಪುರ: ಒಣಗಿರುವ ಫಸಲಿಗೆ ಬೆಳೆ ಪರಿಹಾರ ನೀಡಬೇಕು, ಬೆಳೆಸಾಲ ಮನ್ನಾ ಮಾಡಬೇಕು ಎಂಬ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ಮಾನವ ಸರಪಳಿ ರಚಿಸಿ ಹಾಗೂ ರಸ್ತೆ ನಡೆಸಿ ಪ್ರತಿಭಟಿಸಿದರು.

ಬೆಳಿಗ್ಗೆ 11.30ರಲ್ಲಿ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ರೈತ ಸಂಘದ ಕಾರ್ಯಕರ್ತರು ಮಾನವ ಸರಪಳಿ ರಚಿಸಿದರು. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳು ಒಣಗಳು ನೀರಾವರಿ ಸಲಹಾ ಸಮಿತಿಯೇ ನೇರ ಹೊಣೆಹೊರಬೇಕಾಗಿದೆ. ಸಲಹಾ ಸಮಿತಿ ಸಭೆ ಕರೆಯದ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಳೆದು ನಿಂತಿರುವ 3 ಲಕ್ಷ ಎಕರೆ ಕಬ್ಬು, ಮತ್ತು 2 ಲಕ್ಷಕ್ಕೂ ಹೆಚ್ಚು ಎಕರೆ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ದೂರಿದರು.

ನಂತರ 30 ನಿಮಿಷಗಳ ಕಾಲ ರಸ್ತೆ ನಡೆಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿದರು. ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ.ಗೌಡೇಗೌಡ, ತಾಲ್ಲೂಕು ಅಧ್ಯಕ್ಷ ಹರವು ಪ್ರಕಾಶ್, ಕಾರ್ಯದರ್ಶಿ ಅಮೃತಿ ರಾಜಶೇಖರ್, ಮುಖಂಡರಾದ ಎಚ್.ಎನ್.ವಿಜಯಕುಮಾರ್, ದಯಾನಂದ್, ಶಂಕರೇಗೌಡ, ಉಮಾಶಂಕರ್, ಲೋಕೇಶ್. ಕೆನ್ನಾಳು ನಾಗರಾಜು, ಹಿರೇಮರಳಿ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಪಿ.ಎಸ್. ಜಗದೀಶ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಪ್ರಕಾಶ್‌ಬ್ಯಾಡರಹಳ್ಳಿ ಭಾಗವಹಿಸಿದ್ದರು.

ಬೆಂಬಲ ಬೆಲೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ
ಮದ್ದೂರು: ಭತ್ತ ಮತ್ತು ಕಬ್ಬು ಬೆಳೆಯ ಖರ್ಚು-ಆದಾಯ ಆಧ್ಯಯನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಬೆಲೆ ಆಯೋಗ ರಚಿಸಲು ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಮತ್ತು ಕೃಷಿ ಕಾರ್ಮಿಕರ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಧರಣಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಒಂದು ಗಂಟೆಗೂ ಹೆಚ್ಚು ಕಾಲ ಕಚೇರಿ ಎದುರು ಧರಣಿ ನಡೆಸಿ ನಂತರ ತಹಶೀಲ್ದಾರ್ ಸವಿತಾ ಅವರಿಗೆ ಮನವಿ ಸಲ್ಲಿಸಿದರು.

ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಮಾತನಾಡಿ, ಕಳೆದ ಸಾಲಿನ ಹಾಗೂ ಪ್ರಸಕ್ತ ಸಾಲಿನ ಕಬ್ಬಿಗೆ 3500ರೂಪಾಯಿ ದರ ನಿಗದಿಗೊಳಿಸಬೇಕು. ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಸಿದ  ಕಬ್ಬಿನ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮತ್ತು ಕೃಷಿ ಕಾರ್ಮಿಕರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನಕುಮಾರ್, ಸಮಿತಿಯ ಜಿಲ್ಲಾ ಸಂಚಾಲಕ ಕೊಟ್ಟಿಗೆ ಪುಟ್ಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಟಿ.ಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಂದರ್ಶ, ಕೆ.ಆರ್.ಮಹೇಶ್, ಸಿ.ನಾಗೇಗೌಡ, ಮುಖಂಡ ರಾದ ಜಿ.ಬಿ.ಶಂಕರ್, ಕುದರಗುಂಡಿ ನಾಗೇಶ್, ಸಿದ್ದರಾಮಯ್ಯ, ಸಿದ್ದರಾಜು, ಚಿದಾನಂದ, ಪುರುಷೋತ್ತಮ್, ಶಿವಲಿಂಗೇಗೌಡ, ಕೆ.ಎಸ್. ರಮೇಶ್, ಶಿವಲಿಂಗಪ್ಪ, ರಾಮಚಂದ್ರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

`ಸಾಲ ಮನ್ನಾ ಮಾಡಿ~

ಶ್ರೀರಂಗಪಟ್ಟಣ: ನೀರಿನ ಅಭಾವದಿಂದ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದು, ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೀರಿನ ಅಭಾವದಿಂದ ಕಬ್ಬು, ತರಕಾರಿ ಇತರ ಬೆಳೆ ಒಣಗಿ ಹೋಗಿವೆ. ಇದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಕೆಆರ್‌ಎಸ್ ಜಲಾಶಯದಲ್ಲಿ ಇರುವ ನೀರನ್ನು ಮೋಟರ್ ಬಳಸಿ ನಾಲೆಗಳಿಗೆ ಹರಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.

ರಸಗೊಬ್ಬರದ ಬೆಲೆ ಹೆಚ್ಚಳವು ರೈತರಿಗೆ ಹೊರೆಯಾಗಿದೆ. ಬೆಲೆ ಇಳಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸಂಸತ್  ಸದಸ್ಯರು ಈ ಕುರಿತು ದನಿ ಎತ್ತಬೇಕು. ದುಬಾರಿಯಾದ ಕೃಷಿ ವೆಚ್ಚ, ವೈಜ್ಞಾನಿಕ ಬೆಲೆ ಸಿಗದೇ ಇರುವುದು ಹಾಗೂ ಬರಗಾಲದ ಪರಿಣಾಮ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ನಾಗೇಂದ್ರಸ್ವಾಮಿ, ಯುವ ಘಟಕದ ಅಧ್ಯಕ್ಷ ಕಡತನಾಳು ಬಾಬು, ಪಾಂಡು, ಟಿ.ಸಿ.ದೇವೇಗೌಡ, ಬಿ.ಎಸ್.ರಮೇಶ್, ಯತೀಶ್, ಸ್ವಾಮಿಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.