ADVERTISEMENT

ಬೆಳೆ ನಷ್ಟ ಪರಿಹಾರ ನೀಡಲು ಸೂಚನೆ

ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 11:35 IST
Last Updated 1 ಜೂನ್ 2018, 11:35 IST

ಮಂಡ್ಯ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ವಿಮಾ ಹಣವನ್ನು ಶೀಘ್ರವಾಗಿ ನೀಡಲು ವಿಮಾ ಸಂಸ್ಥೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಯುನೈಟೆಡ್ ಇಂಡಿಯಾ ಕಂಪನಿಯು 2016ನೇ ಸಾಲಿನಲ್ಲಿ ರಬಿ ಬೆಳೆ ತೆಗೆದ 43,575 ರೈತರಿಗೆ ಹಾಗೂ 2017ನೇ ಸಾಲಿನಲ್ಲಿ ಖಾರೀಫ್ ಬೆಳೆ ಹಾಗೂ ರಬಿ ಬೆಳೆ ತೆಗೆದ 22,469 ರೈತರಿಗೆ ಬೆಳೆ ವಿಮೆ ಹಣವನ್ನು ನೀಡಬೇಕಾಗಿದೆ. ಜಿಲ್ಲೆಯಲ್ಲಿ 2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12 ಆಹಾರ ಧಾನ್ಯ, ಎಣ್ಣೆಕಾಳು ಬೆಳೆಗಳು ಹಾಗೂ 2 ತೋಟಗಾರಿಕಾ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಭತ್ತ ನೀರಾವರಿ ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಅಧಿಸೂಚಿತ ಗ್ರಾಮ ಪಂಚಾಯತಿಗಳಲ್ಲಿ ರೈತರು ವಿಮೆಗೆ ನೋಂದಾಯಿಸಿಕೊಳ್ಳಬಹುದು. ರಾಗಿ (ಮಳೆ ಆಶ್ರಿತ) ಬೆಳೆಗೆ ನಾಗಮಂಗಲ ಹಾಗೂ ಪಾಂಡವಪುರ ತಾಲ್ಲೂಕುಗಳ ಅಧಿಸೂಚಿತ ಗ್ರಾ.ಪಂ.ಗಳಲ್ಲಿ, ಮುಸುಕಿನ ಜೋಳ (ಮಳೆ ಆಶ್ರಿತ) ಬೆಳೆಗೆ ಮಳವಳ್ಳಿ ತಾಲ್ಲೂಕಿನ ಅಧಿಸೂಚಿತ ಗ್ರಾ.ಪಂ.ಗಳಲ್ಲಿ ರೈತರು ವಿಮೆಗೆ ನೋಂದಾಯಿಸಿಕೊಳ್ಳಬಹುದು.

ADVERTISEMENT

ಭತ್ತ, ರಾಗಿ, ಮುಸುಕಿನ ಜೋಳ (ನೀರಾವರಿ ಹಾಗೂ ಮಳೆ ಆಶ್ರಿತ), ತೊಗರಿ, ಹುರುಳಿ, ಎಳ್ಳು, ನೆಲಗಡಲೆ, ಅಲಸಂದೆ (ಮಳೆ ಆಶ್ರಿತ), ಟೊಮೆಟೊ, ಎಲೆಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ರೈತರು ವಿಮೆಗೆ ನೋಂದಾಯಿಸಬಹುದು.

ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮೆಯು ಕಡ್ಡಾಯವಾಗಿದೆ. ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿದ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ ಹಾಗೂ ಕಂದಾಯ ರಸೀದಿಯನ್ನು ನೀಡಬೇಕು ಎಂದು ತಿಳಿಸಿದರು.

ಜಿ.ಪಂ ಉಪಕಾರ್ಯದರ್ಶಿ ಕೃಷ್ಣಪ್ಪ, ತೋಟಗಾರಿಕೆ ಉಪನಿರ್ದೇಶಕ ರಾಜು, ಸಹಕಾರ ಇಲಾಖೆ ಉಪನಿಬಂಧಕ ಕುಮಾರ್, ಜಿಲ್ಲಾ ಸಾಂಖ್ಯ ಸಂಗ್ರಹಣಾ ಅಧಿಕಾರಿ ಪದ್ಮಶೇಖರ್ ಪಾಂಡೆ ಇದ್ದರು.

ಪ್ರಚಾರ ನೀಡಲಾಗುತ್ತದೆ

ಬೆಳೆ ವಿಮೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಯಾಂಕುಗಳು, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಗಳು ಸೇರಿ ಇತರ ಕೃಷಿ ಸಂಬಂಧಿತ ಇಲಾಖೆಗಳಿಗೆ ಹಸ್ತ ಪ್ರತಿಗಳನ್ನು ವಿತರಿಸಿ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.