ADVERTISEMENT

ಬೈಪಾಸ್ ರಸ್ತೆ: ರೂ. 103 ಕೋಟಿ ಯೋಜನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:05 IST
Last Updated 8 ಜೂನ್ 2011, 9:05 IST

ಬೆಂಗಳೂರು: ಮಂಡ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಸಂಬಂಧ ಅಂದಾಜು 103 ಕೋಟಿ ರೂಪಾಯಿಗಳ ಮೊತ್ತದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಮರಿತಿಬ್ಬೇಗೌಡ ಪರವಾಗಿ ವೈ.ಎ. ಅಶ್ವತ್ಥನಾರಾಯಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಬೆಂಗಳೂರು- ಮೈಸೂರು ರಸ್ತೆಯು ಮಂಡ್ಯ ನಗರದ ಮಧ್ಯ ಭಾಗದಲ್ಲಿ ಹಾದು ಹೋದರೂ, ಇದು ಚತುಷ್ಪಥ ರಸ್ತೆಯಾದ ಕಾರಣ ವಾಹನಗಳ ಸಾಂದ್ರತೆ ಹೊರುವ ಸಾಮರ್ಥ್ಯವಿದೆ. ಆದರೂ, ಭವಿಷ್ಯದಲ್ಲಿ ವಾಹನಗಳ ಸಾಂದ್ರತೆ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬೈಪಾಸ್ ರಸ್ತೆ ನಿರ್ಮಿಸಲು 2006-07ನೇ ಸಾಲಿನ ದರ ಪಟ್ಟಿಯಂತೆ 103 ಕೋಟಿ ರೂಪಾಯಿಗಳ ಮೊತ್ತದ ಯೋಜನೆ ರೂಪಿಸಲಾಗಿದೆ~ ಎಂದರು.

`ಈ ಯೋಜನೆಗೆ 75 ಹೆಕ್ಟೇರ್ ಭೂಮಿಯ ಅಗತ್ಯವಿದೆ, ಆದರೆ, ಇದುವರೆಗೆ ಭೂಸ್ವಾಧೀನ ಕಾರ್ಯಕೈಗೊಂಡಿರುವುದಿಲ್ಲ. ವಾಹನ ಸಾಂದ್ರತೆಯ ಬೆಳವಣಿಗೆಯನ್ನಾಧರಿಸಿ ಯೋಜನೆ ಪರಿಗಣಿಸಲು ಸರ್ಕಾರ ಉದ್ದೇಶಿಸಿದೆ~ ಎಂದರು.

ಈ ಮಧ್ಯೆ, ಮಂಡ್ಯ ನಗರದ ಬಳಿ ಬೈಪಾಸ್ ರಸ್ತೆ ನಿರ್ಮಿಸಲು ಎರಡು ಕಡೆ ರೈಲು ಮಾರ್ಗಗಳು ಅಡ್ಡಿಯಾಗಲಿವೆ. ಅಲ್ಲದೆ, ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದು ವಿಳಂಬವಾಗಲಿದೆ.
 
ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ ಎಂದು ಸದಸ್ಯ ಗೋ. ಮಧುಸೂದನ್ ಸಲಹೆ ಮಾಡಿದರು.

ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ಯಾವುದೇ ಯೋಜನೆ ಕೈಗೊಂಡರೂ ಬಿಓಟಿ (ನಿರ್ಮಾಣ, ನಿರ್ವಹಣೆ, ಹಸ್ತಾಂತರ) ಆಧಾರದಲ್ಲಿ ನಿರ್ಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.