ADVERTISEMENT

ಬ್ಯಾಡರಹಳ್ಳಿ:ಇಲ್ಲೊಂದು ಮಾದರಿ ಕನ್ನಡ ಶಾಲೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2011, 8:00 IST
Last Updated 13 ನವೆಂಬರ್ 2011, 8:00 IST
ಬ್ಯಾಡರಹಳ್ಳಿ:ಇಲ್ಲೊಂದು ಮಾದರಿ ಕನ್ನಡ ಶಾಲೆ
ಬ್ಯಾಡರಹಳ್ಳಿ:ಇಲ್ಲೊಂದು ಮಾದರಿ ಕನ್ನಡ ಶಾಲೆ   

ಮದ್ದೂರು: ಈ ಸರ್ಕಾರಿ ಶಾಲೆಯ ಆವರಣ ಹಸಿರುಮಯ. ಮಕ್ಕಳೇ ಪೋಷಿಸಿದ ಗಿಡಗಳು ತಂಪನ್ನೆರೆಯುತ್ತವೆ. ಶಾಲೆಯ ಹಸಿರು ಉದ್ಯಾನ ಮನಸೆಳೆಯಲಿದೆ. ಗ್ರಾಮಸ್ಥರು ಹಾಗೂ ಶಿಕ್ಷಕರು ಮನಸ್ಸು ಮಾಡಿದರೆ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ಈ ಕನ್ನಡ ಮಾದರಿ ಸರ್ಕಾರಿ ಶಾಲೆ. ಇದು,  ಬ್ಯಾಡರಹಳ್ಳಿ ಶಾಲೆ.
ಮೂಲಸೌಕರ್ಯಗಳಿಲ್ಲ ಎಂಬ  ಕನ್ನಡ ಶಾಲೆಗಳ ಸಂಕಷ್ಟದ ನಡುವೆಯೇ 1955ರಲ್ಲಿ ಆರಂಭಗೊಂಡ  ಬ್ಯಾಡರಹಳ್ಳಿಯ ಈ ಶಾಲೆ ಗಮನಸೆಳೆಯುತ್ತಿದೆ.  ಶಾಲೆಗೆ ನೀವು ಕಾಲಿಟ್ಟರೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಭವ. ಶಿಕ್ಷಕರಿಲ್ಲದಿದ್ದರೂ ಗೋಡೆಗಳು- ಕಂಬಗಳೇ ಪಾಠ ಹೇಳಲಿವೆ. ಇತಿಹಾಸ, ವಿಜ್ಞಾನ, ಸಾಮಾನ್ಯಜ್ಞಾನ, ಕನ್ನಡ ಇಂಗ್ಲಿಷ್  ವ್ಯಾಕರಣ ವಿಷಯದ ಚಿತ್ರಪಟ ಗೋಡೆ-ಕಂಬಗಳಲ್ಲಿ ಲಭ್ಯ.

ಸೌರವ್ಯೆಹ, ಕಂಪ್ಯೂಟರ್, ಜಲಚಕ್ರ, ಅಂತರಿಕ್ಷ, ಕ್ರಿಕೆಟ್ ಕ್ರೀಡಾಂಗಣದ ನೋಟ, ರಾಷ್ಟ್ರನಾಯಕರು, ಕವಿಗಳ ಭಾವಚಿತ್ರಗಳು ಶಾಲೆಯ ಎಲ್ಲಾ ಕೊಠಡಿಗಳ ಗೋಡೆಗಳಲ್ಲದೇ.... ಮೇಲ್ಛಾವಣಿಯನ್ನು ಆವರಿಸಿರುವುದು ಇಲ್ಲಿನ ವಿಶೇಷ.

ಮುಖ್ಯಶಿಕ್ಷಕ ಪ್ರಭಾಕರ್, ಉತ್ಸಾಹಿ ಸಹಶಿಕ್ಷಕರಾದ ಡಿ.ಎನ್.ರಮಾ, ಬಿ.ನಂಜೇಗೌಡ, ಸಿ.ನಾಗರಾಜು, ಎಸ್. ಪ್ರಕಾಶ್, ಕೆ.ಮಾದೇಶ್ ಶ್ರದ್ಧೆ ವಹಿಸಿ ಸರ್ಕಾರದ ಅನುದಾನ ಸದ್ಭಳಕೆ ಮಾಡಿ ಇಡೀ ಶಾಲೆಯನ್ನು ಸುಂದರಗೊಳಿಸಿದ್ದಾರೆ. ಕಡ್ಡಾಯ ಸಮವಸ್ತ್ರ, ವ್ಯವಸ್ಥಿತ ರೇಡಿಯೋ ಪಾಠ, ಕಂಗೋಳಿಸುವ ಹಸಿರು ತೋಟ, ಶುಚಿ-ರುಚಿ ಮಧ್ಯಾಹ್ನದ ಬಿಸಿಯೂಟ, ವ್ಯವಸ್ಥಿತ ಪಾಠ ಶಾಲೆಯ ನಿತ್ಯ ನೋಟ. ಶಾಲಾ ಮಕ್ಕಳೇ ಶ್ರಮ ದಾನದಿಂದ ರೂಪಿಸಿರುವ ಮಾದರಿ ಶಾಲಾ ಕೈತೋಟ.

ಈಗ ಶಾಲೆಯಲ್ಲಿ ಕಡಿಮೆ ಖರ್ಚಿನ ಗ್ರಂಥಾಲಯ ತೆರೆದಿದೆ. ವೃತ್ತಿ ತರಬೇತಿಗಾಗಿ ಹೊಲಿಗೆ ತರಗತಿ ಆರಂಭವಾಗಿದೆ. ಜಿಲ್ಲೆಯಲ್ಲಿಯೇ ಮಾದರಿ ಎನ್ನುವ ಶೌಚಾಲಯ ನಿರ್ಮಿಸಲಾಗಿದೆ. ಮಕ್ಕಳಿಗೆ ಶಾಲಾ ವಿವಿಧ ವಿಭಾಗಗಳ ಉಸ್ತುವಾರಿ ವಹಿಸಲಾಗಿದೆ. ಹೀಗಾಗಿ ಇಲ್ಲಿ ಎಲ್ಲದರ ನಿರ್ವಹಣೆ ಸುಲಭ. ಸುಲಲೀತ. 
ಸರ್ಕಾರಿ ಶಾಲೆಯೆಂದರೆ ಧೂಳಿಡಿದು ಮುರಿದ ಪೀಠೋಪಕರಣಗಳ ಅವ್ಯವಸ್ಥಿತ ಶಾಲೆ ಎಂಬ ಮಾತನ್ನು ಈ ಶಾಲೆ ಹುಸಿಯಾಗಿಸಿದೆ.

ಇಲ್ಲಿನ ಶಾಲಾಭಿವೃದ್ಧಿ ಸಮಿತಿ  ಮುಖ್ಯಶಿಕ್ಷಕರ ಕೊಠಡಿಯನ್ನು `ದುಂಡು ಮೇಜಿನ ಪರಿಷತ್ತಿನ ಸಭಾಂಗಣ~ದ ರೀತಿ ಸಜ್ಜುಗೊಳಿಸಿದೆ.

ಪ್ರತಿ ವರ್ಷ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಇಡೀ ಊರೇ ಸಂಭ್ರಮದಿಂದ ಇಲ್ಲಿ ಭಾಗಿಯಾ ಗುತ್ತದೆ. ಈ ಸಂದರ್ಭದಲ್ಲಿ ಶಾಲೆಯ ಏಳಿಗೆಗಾಗಿ ಬಡಜನರಿಂದ ಹಿಡಿದೂ ಶ್ರೀಮಂತರವರೆಗೂ ತಮ್ಮ ಕೈಲಾದ ಧನಸಹಾಯವನ್ನು ನೀಡು ತ್ತಾರೆ. ಹೀಗೆ ಸಂಗ್ರಹವಾದ 50ಸಾವಿರಕ್ಕೂ ಹೆಚ್ಚು ಹಣ ಇದೀಗ ಶಾಲೆಯ ಖಾತೆಯಲ್ಲಿದೆ.

ಕಾನ್ವೆಂಟ್ ಶಾಲೆ: ಇದೀಗ ಈ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥ ಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಶಾಲಾಭಿವೃದ್ಧಿ ಸಮಿತಿ ಖಾಸಗಿಯಾಗಿ ಶಿಕ್ಷಕಿ ನೇಮಿಸಿದ್ದಾರೆ. 30 ಮಕ್ಕಳು ಎಲ್‌ಕೆಜಿ-ಯುಕೆಜಿ ವಿಭಾಗಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಅಕ್ಷರಾಭ್ಯಾಸ ಮಾಡುತ್ತಿವೆ.

`ಮಕ್ಕಳು ಯಾವುದೇ ಇಂಗ್ಲಿಷ್ ಶಾಲೆಗೆ ಕಡಿಮೆ ಇಲ್ಲದಂತೆ ಕಲಿಯಬೇಕು ಎನ್ನುವುದೇ ನಮ್ಮೂರ ಶಾಲೆಯ ಹೆಗ್ಗುರಿ. ಈ ಗುರಿಯ ಸಾಧನೆಗೆ ನಮ್ಮ ಬೆಂಬಲ ಇದ್ದೆ ಇದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಪುಟ್ಟಸ್ವಾಮಿ.

ಈ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಿದೆ. ಅಜೀಂ ಪ್ರೇಮ್‌ಜಿ ಪೌಂಡೇಷನ್ 8ದಿನಗಳ ಕಾಲ ಶಾಲೆಯಲ್ಲಿಯೇ ಉಳಿದು ಈ ಮಾದರಿ ಶಾಲೆಯ ಕಾರ್ಯಚಟು ವಟಿಕೆಗಳ ವಿಡಿಯೋ ಚಿತ್ರೀಕರಣ ನಡೆಸಿ ಸ್ಯಾಕ್ಷ್ಯ ಚಿತ್ರ ನಿರ್ಮಿಸಿದೆ.

ಇದು ನಮ್ಮ ಶಾಲೆ, ನಮ್ಮೂರ ಶಾಲೆ ಎನ್ನುವ ಬ್ಯಾಡರಹಳ್ಳಿ ಗ್ರಾಮಸ್ಥರ ಹೃದಯವಂತಿಕೆ ಹಾಗೂ ಶಿಕ್ಷಣ ಕಾಳಜಿ ಇಡೀ ಜಿಲ್ಲೆಗೆ ಮಾದರಿಯಾಗಿದೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.