ADVERTISEMENT

ಭವನ ನಿರ್ಮಾಣಕ್ಕೆ 60 ಲಕ್ಷ:ಶೌಚಾಲಯವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 6:30 IST
Last Updated 14 ಜನವರಿ 2012, 6:30 IST

ಮಂಡ್ಯ: ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಆಗುತ್ತಿದೆ. ಮೊದಲ ಹಂತಸ್ತಿನ ನಿರ್ಮಾಣ ಬಹುತೇಕ ಪೂರ್ಣ ಆಗಿದೆ. ಆದರೆ, ಅಲ್ಲಿ ಶೌಚಾಲಯವೇ ಇಲ್ಲ. ಇಂಥ ಯೋಜನೆ ರೂಪಿಸುವ ಅಧಿಕಾರಿಗಳಿಗೆ ಕನಿಷ್ಠ ಜವಾಬ್ದಾರಿ ಇದೆಯಾ?.

ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅವರ ಪ್ರಶ್ನೆ ಇದು. ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಉಲ್ಲೇಖಿಸಿದ ಅವರು, ಭೂ ಸೇನಾ ನಿಗಮ ಈ ಭವನ ನಿರ್ಮಿಸುತ್ತಿದೆ. ಕನಿಷ್ಠ ಪ್ಲಾನ್ ಹಂತದಲ್ಲಿ ಆದರೂ ಇದನ್ನು ಗಮನಿಸಬಾರದೇನ್ರಿ ಎಂದ ಪ್ರಶ್ನಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಬೆಳ ಗೊಳದಲ್ಲಿ ನಿರ್ಮಾಣ  ಆಗುತ್ತಿರುವ ಈ ಭವನದ ಯೋಜನೆಗೆ ಸಂಸದರು, ಶಾಸಕರ ಅನುದಾನದ ಜೊತೆಗೆ, ಸುವರ್ಣ ಗ್ರಾಮದ ಯೋಜನೆಯಡ ನೆರವು ಪಡೆಯಲಾಗಿದೆ ಎಂದರು.

ಈ ಹಂತದಲ್ಲಿಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳ ಬೇಕು ಎಂದ ಸಲಹೆ ಮಾಡಿದರೆ, ಆಗುವುದಿಲ್ಲ ಎಂದು ಅಧಿಕಾರಿಗಳು ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಾರೆ ಎಂದು ಸಭೆಯಲ್ಲಿ ಹಾಜರಿದ್ದ ನಿಗಮದ ಅಧಿಕಾರಿಗೆ ತರಾಟೆ ತೆಗೆದುಕೊಂಡರು.

ಉದ್ದೇಶಿತ ಭವನದ ಬಳಿ ವಿವಿಧ ದೇಗುಲಗಳಿವೆ. ಮದುವೆ, ಸಮಾರಂಭಗಳು ನಡೆಯಲಿವೆ. ಜನರು ಸೇರುವ ಇಂಥ ಕಡೆ ಸಮುದಾಯ ಭವನ ನಿರ್ಮಿಸಿದಾಗ ಶೌಚಾಲಯ ಬೇಕು ಎಂದು ಅದಿಕಾರಿಗಳಿಗೆ ಅನಿಸಲಿಲ್ಲವಾ? ಜನರು ಎಲ್ಲಿಗೆ ಹೋಗಬೇಕು ಎಂದು ಟೀಕಿಸಿದರು.

ಅಧಿಕಾರಿಯು ಭವನವನ್ನು 26 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದರೂ ಟೀಕೆಗೆ ಗುರಿಯಾಯಿತು.  ಯೋಜೆನಯ ವೆಚ್ಚದ ಅರಿವೂ ಇಲ್ಲವಲ್ರಿ ಎಂದು ಸ್ಥಾಯಿ ಸಮಿತಿ ಸದಸ್ಯರಾದ ಮಂಚೇಗೌಡ, ಮಾದಪ್ಪ ದನಿಗೂಡಿಸಿದರು.

ಉಳಿದಂತೆ, ಕುಡಿಯುವ ನೀರು ಯೋಜನೆಗಳ ಅನುಷ್ಠಾನ ವಿಳಂಬ ಕೂಡಾ ತೀವ್ರ ಚರ್ಚೆಗೆ ಗುರಿಯಾ ಯಿತು. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ್ದರೂ, ಕಲ್ಪಿಸಿಲ್ಲ ಎಂದು ಅಧ್ಯಕ್ಷರು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಅಧಿ ಕಾರಿಗಳು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ವಸಂತಪುರ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ವಿದ್ಯುದ್ದೀಕರಣ  ಆಗಿದೆ. ಜೈನಹಳ್ಳಿ ಯೋಜನೆ ಕಾಮ ಗಾರಿ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುದ್ದೀಕರಣಕ್ಕೆ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸುವ ಬಗ್ಗೆ ಚೆಸ್ಕಾಂ ವತ್ತ ಕಛೇರಿಯಲ್ಲಿ ಪ್ರತ್ಯೇಕ ಸಭೆ ಕರೆದಿದ್ದು, ಮಾರ್ಚ್ 2012 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು. 
 
ತ್ವರಿತ ಕಾಮಗಾರಿಗೆ ಸೂಚನೆ
ಮಂಡ್ಯ: ಕುಡಿಯುವ ನೀರು, ಗಂಗಾ ಕಲ್ಯಣಾ ಯೋಜನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಣ್ಣ ಅಧಿಕಾರಿಗಳಿಗೆ ತಿಳಿಸಿದರು.

ಶುಕ್ರವಾರ  ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ಹಂತಕ್ಕೆ ಬ ಬಂದಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೇಗೌಡ ಅವರು, ನಿಗದಿತ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಅಧಿಕಾರಿಗಳು ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಮಾದಪ್ಪ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್,  ಯೋಜನಾ ನಿರ್ದೇಶಕ ಶಂಕರರಾಜು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

33 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ
ಮಂಡ್ಯ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿಗಾಗಿ 33 ಸಾವಿರ ಕ್ವಿಂಟಾಲ್ ಬತ್ತದ ಬಿತ್ತನೆ ಬೀಜ ವಿತರಿಸುವ ಗುರಿ ಇದ್ದು, ಇದಕ್ಕಾಗಿ ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಂಗಯ್ಯ ಪ್ರತಿಕ್ರಿಯಿಸಿದರು.

 ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಪ್ರಗತಿಯ ವಿವರಗಳನ್ನು ನೀಡಿದ ಅವರು, ಈಗಾಗಲೇ ಬಿತ್ತನೆ ಬೀತ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಬೇಸಿಗೆಯಲ್ಲಿ  8 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗುವುದು ಎಂದರು.

ಕೆ.ಆರ್.ಪೇಟೆ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಸುಳಿಕೊರಕ, ಗೊಣ್ಣೆ ಉಳು ರೋಗ ಭಾದೆ ಕಂಡು ಬಂದಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಲಾಗಿತ್ತು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT