ADVERTISEMENT

ಭಾವೈಕ್ಯ ಶಿಬಿರಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:20 IST
Last Updated 2 ಜನವರಿ 2012, 10:20 IST

ಮಂಡ್ಯ: ವಿವಿಧ ರಾಜ್ಯ, ಜಿಲ್ಲೆಗಳ ಯುವಜನರ ನಡುವಿನ ಮುಖಾಮುಖಿ ಮತ್ತು ಸಂಸ್ಕೃತಿ ವಿನಿಮಯಕ್ಕೆ ವೇದಿಕೆಯಾದ, ನಗರದಲ್ಲಿ ಆಯೋಜನೆಗೊಂಡಿದ್ದ 9 ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಭಾನುವಾರ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು, ಶಿಬಿರದಲ್ಲಿ ಪಡೆದ ಸದ್ಭಾವನಾ ಅನುಭವಗಳನ್ನು ತಮ್ಮ ಸಮಕಾಲೀನರ ಜೊತೆಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯವನ್ನು ಪಸರಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ಉಪ ಕಾರ್ಯಕ್ರಮ ಸಲಹೆಗಾರರಾದ ಡಾ. ಎಚ್.ಎಸ್.ಸುರೇಶ್ ಅವರು, ಧರ್ಮ ಎಂದಿಗೂ ಬೆಳಕಾಗಬೇಕೇ ವಿನಾ ಬೆಂಕಿ ಆಗಬಾರದು. ಜನವರಿ ಎಂಬುದು ಸಂಕ್ರಮಣದ ಕಾಲ. ಇದು, ಭಾವೈಕ್ಯ ಪಸರಿಸಲು ನಾಂದಿಯಾಗಲಿ ಎಂದು ಆಶಿಸಿದರು.

ಜನವರಿ ತಿಂಗಳು ಸುಗ್ಗಿ ಕಾಲ. ಹೆಸರು ಬೇರೆಯಾದರೂ ಎಲ್ಲೆಡೆ ಫಸಲು ಕೈಗೆ ಸಿಗುವ ಕಾಲ. ಇದೇ ತಿಂಗಳಲ್ಲಿ ಯುವಜನರನ್ನು ಬೆಸೆಯುವ ಯುವಜನೋತ್ಸವ, ವಿವೇಕಾನಂದರ ಜನ್ಮದಿನ, ದೇಶದ ಐಕ್ಯತೆಯನ್ನು ಬಿಂಬಿಸುವ ಗಣರಾಜ್ಯ ದಿನವೂ ಬರುತ್ತದೆ. ಹೀಗಾಗಿಯೇ ಇದು ಸಂಕ್ರಮಣದ ಮಾಸ ಎಂದು ವ್ಯಾಖ್ಯಾನಿಸಿದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪುಟ್ಟಮಾದಯ್ಯ, ನೆಹರು ಯುವಕೇಂದ್ರದ ನಿರ್ದೇಶಕ ಆರ್.ನಟರಾಜನ್ ಅವರು ಭಾಗವಹಿಸಿದ್ದರು.

ಪ್ರಮಾಣಪತ್ರ ವಿತರಣೆ: ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರದ ವಿತರಣೆ, ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನವು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.