ADVERTISEMENT

ಭಾಷೆ ಹೇರಿಕೆಯನ್ನು ವಿರೋಧಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:57 IST
Last Updated 23 ಜುಲೈ 2017, 9:57 IST

ನಾಗಮಂಗಲ: ನಾಡಗೀತೆ ಇರುವ ರಾಜ್ಯಕ್ಕೆ ನಾಡಧ್ವಜ ಇರಬಾರದೇ ಎಂದು ನಿರ್ದೇಶಕ ಬಿ.ಸುರೇಶ ಪ್ರಶ್ನಿಸಿದರು. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಶಂಕರ್ ನಾಗ್ ವೇದಿಕೆಯಲ್ಲಿ ಕನ್ನಡ ಸಂಘ ಏರ್ಪಡಿಸಿದ್ದ  12ನೇ ರಾಜ್ಯಮಟ್ಟದ ನಾಗರಂಗ ನಾಟ ಕೋತ್ಸವದ ಸಮಾರೋಪ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ನಾಡಧ್ವಜ ಬೇಕು ಎನ್ನುವವರನ್ನು ದೇಶದ್ರೋಹಿಗಳೆನ್ನಲಾಗುತ್ತಿದೆ. ಇಂಥವರಿಗೆ ಮೂಲ ಜ್ಞಾನವಿಲ್ಲ. ಭಾರತದಲ್ಲಿ ಯಾವುದೇ ರಾಷ್ಟ್ರಭಾಷೆ ಇಲ್ಲ. 22 ಪ್ರಾದೇಶಿಕ ಭಾಷೆಗಳನ್ನು ಸಂವಿಧಾನ ಒಪ್ಪಿದೆ. ನಮ್ಮ ಮೇಲೆ ಬೇರೆ ಭಾಷೆಯನ್ನು ಹೇರಲು ಹೊರಟಿರುವ ಎಲ್ಲರನ್ನೂ ನಾವು ವಿರೋಧಿಸಬೇಕಿದೆ. ಕೇಂದ್ರದಿಂದ ಕಳುಹಿಸಿದ್ದೆಲ್ಲವನ್ನೂ ಒಪ್ಪುವುದನ್ನು ನಿಲ್ಲಿಸಬೇಕಿದೆ’ ಎಂದರು.

ಒಬ್ಬ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವುದು ರಂಗಭೂಮಿ, ಅದನ್ನು ಉಳಿಸಿ–ಬೆಳೆಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಕನ್ನಡ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಟಿ.ವಿ. ಮಾಧ್ಯಮ ವಸ್ತುಗಳನ್ನು ಮಾರುವ ದಿನಸಿ ಅಂಗಡಿಗಳಂತಾಗಿದೆ. ಸಿನಿಮಾ ಕೂಡ ಭ್ರಮಾಲೋಕವನ್ನು ಸೃಷ್ಟಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಂಗಕರ್ಮಿ ಕೆ.ವಿ. ನಾಗರಾಜ ಮೂರ್ತಿ ಮಾತ ನಾಡಿ, ‘ಯಾರನ್ನೂ ಓಲೈಸದೆ ರಂಗಭೂಮಿ ಮತ್ತು ಸಾಹಿತ್ಯಕ ಕೆಲಸಗಳನ್ನು ಮಾಡುತ್ತಿರುವ ಕನ್ನಡ ಸಂಘದ ಕಾರ್ಯ ಅಭಿನಂದನಾರ್ಹ’ ಎಂದರು. ರಾಜ್ಯಕ್ಕೆ ಬರ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯ ಸಂಸದರು ಮಾಡಬೇಕು ಎಂದರು.

ಕನ್ನಡ ಸಂಘದ ಅಧ್ಯಕ್ಷ ನಾ.ನಟರಾಜು ಅಧ್ಯಕ್ಷತೆ ವಹಿಸಿದ್ದರು. ಗಾಯಕ ರವಿ ಮೂರೂರು ದಂಪತಿಯನ್ನು ಸನ್ಮಾನಿಸಲಾಯಿತು. ನಂತರ ಬೆಂಗಳೂರಿನ ‘ದೃಶ್ಯ ಕಾವ್ಯ’ ತಂಡ ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ ಎಂಬ ನಾಟಕ ನಡೆಸಿಕೊಟ್ಟಿತು. ಸಾವಿರಾರು ಸಂಖ್ಯೆ ಯಲ್ಲಿ ರಂಗಾಸಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.