ADVERTISEMENT

ಭಿನ್ನಮತದ ನಡುವೆ ನಾಗರತ್ನಾ ಜಿ.ಪಂ ಅಧ್ಯಕ್ಷೆ

ಜೆಡಿಎಸ್‌ ಅಭ್ಯರ್ಥಿಗೆ 29 ಮತ, ಕಾಂಗ್ರೆಸ್‌ನ ಸಿ.ಸುಜಾತಾಗೆ 12; ಕುತೂಹಲಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:14 IST
Last Updated 23 ಮಾರ್ಚ್ 2018, 12:14 IST

ಮಂಡ್ಯ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆಯ ಕುರಿತು ಉಂಟಾಗಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಹಲವರ ಭಿನ್ನಮತದ ನಡುವೆಯೂ ಗುರುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಕ್ಷೇತ್ರದ ಜೆಡಿಎಸ್‌ ಸದಸ್ಯೆ ಎಸ್‌.ನಾಗರತ್ನಾ ಸ್ವಾಮಿ ಗೆಲುವು ಸಾಧಿಸಿದರು.

ಜೆಡಿಎಸ್‌ನಿಂದ ನಾಗರತ್ನಾ, ಕಾಂಗ್ರೆಸ್‌ನಿಂದ ಸಿ.ಸುಜಾತಾ ನಾಮಪತ್ರ ಸಲ್ಲಿಸಿದ್ದರು. ನಾಗರತ್ನಾ 29, ಸುಜಾತಾ 12 ಮತ ಗಳಿಸಿದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ನಾಗರತ್ನಾ ಅವರ ಆಯ್ಕೆಯನ್ನು ಘೋಷಣೆ ಮಾಡಿದರು. ಜೆಡಿಎಸ್‌ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಹಾಜರಿದ್ದರು. ನೂತನ ಅಧ್ಯಕ್ಷೆಯನ್ನು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್‌.ಎನ್‌.ಯೋಗೇಶ್‌, ಬೋರಯ್ಯ ಅಭಿನಂದಿಸಿದರು.

ADVERTISEMENT

ಮಾಜಿ ಅಧ್ಯಕ್ಷೆ ಪ್ರೇಮಕುಮಾರಿ ಒಪ್ಪಂದದಂತೆ ರಾಜೀನಾಮೆ ನೀಡಿದ ಕಾರಣ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಹಲವು ಸದಸ್ಯೆಯರು ಪೈಪೋಟಿ ನಡೆಸಿದ್ದರು. ಹೀಗಾಗಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಕಳೆದ ಬಾರಿ ಕಡೆ ಗಳಿಗೆಯಲ್ಲಿ ನಾಗರತ್ನಾ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು. ನಾಗಮಂಗಲ ಶಾಸಕ ಎನ್‌.ಚಲುವರಾಯಸ್ವಾಮಿ ಹಾಗೂ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ನಡುವಿನ ಶೀತಲ ಸಮರದಿಂದಾಗಿ ಹಿರಿತನ ಪರಿಗಣಿಸಿ ಪ್ರೇಮಕುಮಾರಿ ಅವರನ್ನು ಆಯ್ಕೆ ಮಾಡಲಾಗಿತ್ತು. 41 ಸದಸ್ಯರ ಜಿಲ್ಲಾ ಪಂಚಾಯಿತಿಯಲ್ಲಿ 29 ಜೆಡಿಎಸ್‌, 12 ಕಾಂಗ್ರೆಸ್‌ ಸದಸ್ಯರು ಇದ್ದಾರೆ.

ಭಿನ್ನಮತ ಸ್ಫೋಟ : ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಐವರು ಸದಸ್ಯೆಯರು ನಾಗರತ್ನಾ ಅವರ ಆಯ್ಕೆಯ ವಿರುದ್ಧ ಆಸಮಾಧಾನ ವ್ಯಕ್ತಪಡಿಸಿದರು. ಸಾಕಷ್ಟು ಅನುಭವ, ಪಕ್ಷಕ್ಕೆ ನಿಷ್ಠೆ ಇರುವ ಸದಸ್ಯೆಯರನ್ನು ಕಡೆಗಣಿಸಿ ವರಿಷ್ಠರು ಅಧ್ಯಕ್ಷ ಸ್ಥಾನವನ್ನು ಹಣಕ್ಕೆ ಮಾರಿಕೊಂಡಿದ್ದಾರೆ ಎಂದು ಅತೃಪ್ತ ಸದಸ್ಯೆಯರು ಜೆಡಿಎಸ್‌ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಸ್ತೂರು ಕ್ಷೇತ್ರದ ಸುಚಿತ್ರಾ, ಚಿಕ್ಕರಸಿನಕೆರೆ ಕ್ಷೇತ್ರದ ಸುಕನ್ಯಾ, ಹೊಳಲು ಕ್ಷೇತ್ರದ ಅನುಪಮಾ, ದುದ್ದ ಕ್ಷೇತ್ರದ ಸುಧಾ, ದೇವಲಾಪುರ ಕ್ಷೇತ್ರದ ರುಕ್ಮಿಣಿ ಅವರು ಜೆಡಿಎಸ್‌ ವರಿಷ್ಠರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.

‘ಹಣದ ಆಮಿಷಕ್ಕೆ ಒಳಗಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ನಾವು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿಕೊಂಡು ಬಂದರೂ ನಮಗೆ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ನಾವೂ ಜನರಿಂದ ಆಯ್ಕೆಯಾಗಿದ್ದೇವೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತನಾಡಿದೆವು. ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿ ನಡೆದದ್ದೇ ಬೇರೆ. ಹೆಚ್ಚು ಹಣವುಳ್ಳವರಿಗೆ ಮಣೆ ಹಾಕಿದ್ದಾರೆ’ ಎಂದು ಸದಸ್ಯೆ ಸುಚಿತ್ರಾ ಆರೋಪಿಸಿದರು.

‘ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುವಾಗ ಪಕ್ಷದ ವರಿಷ್ಠರು ಅರ್ಹತೆಯನ್ನು ಕಡೆಗಣಿಸಿದ್ದಾರೆ. ರಾಜ್ಯ ಮಟ್ಟದ ಮುಖಂಡರು ಆರ್ಹರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಮಗೆ ಅವಕಾಶ ಸಿಗಲಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅಸಮಾಧಾನದ ನಡುವೆಯೂ ನಾವು ಜೆಡಿಎಸ್‌ ಅಭ್ಯರ್ಥಿ ಪರ ನಾವು ಮತ ಚಲಾಯಿಸಿದೆವು’ ಎಂದು ಸದಸ್ಯೆ ಸುಕನ್ಯಾ ಹೇಳಿದರು.
**
ರಾಜೀನಾಮೆ ನೀಡಲು ನಿರ್ಧಾರ

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್‌ ವರಿಷ್ಠರು ಅರ್ಹತೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಅತೃಪ್ತಗೊಂಡಿರುವ ಸುಕನ್ಯಾ, ಸುಚಿತ್ರಾ, ಅನುಪಮಾ, ಸುಧಾ, ರುಕ್ಮಿಣಿ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

‘ಎಲ್ಲಾ ಸದಸ್ಯರು ನಮ್ಮ ಪರವಾಗಿ ಇದ್ದರು. ಆದರೆ ಗುರುವಾರ ನಡೆದ ಚುನಾವಣೆಯಲ್ಲಿ ನಡೆದದ್ದೇ ಬೇರೆ. ಅಧ್ಯಕ್ಷ ಸ್ಥಾನ ಹಣ ಉಳ್ಳವರ ಪಾಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯೆಯರಾಗಿ ಮುಂದುವರಿಯಲು ನಮಗೆ ಇಷ್ಟವಿಲ್ಲ. ಹೀಗಾಗಿ ನಾವು ಐವರು ಸದಸ್ಯೆಯರು ನಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುತ್ತೇವೆ’ ಎಂದು ಸದಸ್ಯೆ ಸುಕನ್ಯಾ ಹೇಳಿದರು.

ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ

ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಕಚೇರಿ ಗೇಟ್‌ನಲ್ಲಿ ಕಾವಲು ನಿಂತಿದ್ದ ಪೊಲೀಸರು, ‘ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ಬಿಡಬಾರದು ಎಂದು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ’ ಎಂದು ಹೇಳಿದರು.

ಪೊಲೀಸ್‌ ಭದ್ರತೆಯ ನಡುವೆ ಚುನಾವಣೆ ನಡೆಯಿತು. ಗೇಟ್‌ ಹೊರಗಿನಿಂದಲೇ ಜನರನ್ನು ತಡೆಯಲಾಯಿತು. ನಾಗರತ್ನಾ ಜಯಗಳಿಸಿರುವ ವಿಷಯ ಘೋಷಣೆ ಮಾಡಿದ ನಂತರ ಅವರ ಬೆಂಬಲಿಗರು ರಸ್ತೆಯಲ್ಲೇ ಪಟಾಕಿ ಸಿಡಿಸಿದರು. ಈ ಸಂದರ್ಭದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.