ADVERTISEMENT

ಮಂಡ್ಯ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ

ಪ್ರಕಟವಾಗದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪಟ್ಟಿ

ಬಸವರಾಜ ಹವಾಲ್ದಾರ
Published 24 ಜೂನ್ 2013, 9:00 IST
Last Updated 24 ಜೂನ್ 2013, 9:00 IST
ಮಂಡ್ಯ ನಗರಸಭೆಯ ಕಟ್ಟಡ
ಮಂಡ್ಯ ನಗರಸಭೆಯ ಕಟ್ಟಡ   

ಮಂಡ್ಯ: ನಗರಸಭೆಯ ನೂತನ ಸದಸ್ಯರ ಆಯ್ಕೆಯಾಗಿ ಮೂರು ತಿಂಗಳು ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಲಕ್ವಾ ಹೊಡೆದಿದೆ.

ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ ಬಜೆಟ್ ಮಂಡನೆಯೇ ಆಗಿಲ್ಲ. ಪರಿಣಾಮ ದಿನನಿತ್ಯದ ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆ ಹೊರತು ಪಡಿಸಿದರೆ ಬೇರಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾರ್ಚ್ ಅಂತ್ಯಕ್ಕೆ ಬಜೆಟ್ ಮಂಡನೆಯಾಗಿ ಏಪ್ರಿಲ್‌ನಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು.

ಮೊದಲ ಮೂರು ತಿಂಗಳು ಪೂರ್ಣಗೊಂಡರೂ ಬಜೆಟ್ ಮಂಡನೆಯೇ ಆಗಿಲ್ಲ. ನಗರದ ಅಭಿವೃದ್ಧಿಗೆ ನೀಡಿರುವ 30 ಕೋಟಿ ರೂಪಾಯಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅವುಗಳಿಗೆ ಸಾಮಾನ್ಯಸಭೆ ಅಂಗೀಕಾರದ ಮುದ್ರೆ ಬೀಳಬೇಕು. ಮೀಸಲಾತಿ ನಿಗದಿ ಪಡಿಸದ್ದರಿಂದ ಅಂಗೀಕಾರದ ಮುದ್ರೆ ಬಿದ್ದಿಲ್ಲ.

ಐದು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿ, ಟೆಂಡರ್‌ಗೆ ಅರ್ಜಿ ಆಹ್ವಾನಿಸಲು ನಗರಸಭೆಯ ಸಾಮಾನ್ಯಸಭೆ ಒಪ್ಪಿಗೆ ಬೇಕು. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ್ದರಿಂದ ಸಭೆ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಗರದ ಅಭಿವೃದ್ಧಿಯ ಮೇಲೆ ಅದರ ಹೊಡೆತ ಬೀಳುತ್ತಿದೆ.
ಮಾರ್ಚ್ 11ರಂದು ಬಹುತೇಕ ಸದಸ್ಯರು ನಗರಸಭೆ ಸದಸ್ಯರಾಗಿ ಆಯ್ಕೆಯಾದ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆಯ್ಕೆ ಮಾಡಿ ಕಳುಹಿಸಿದ ಜನರು, ವಾರ್ಡ್‌ನಲ್ಲಿಯ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸದಸ್ಯರಿಗೆ ಆಗುತ್ತಿಲ್ಲ.

ಚುನಾವಣೆಯಾಗಿ ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತದೆ. ಇದರ ಪರಿಣಾಮ ಅಭಿವೃದ್ಧಿ ಕೆಲಸಗಳ ಮೇಲೆ ಬೀಳುತ್ತಿದೆ. ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ತುರ್ತಾಗಿ ಆಗಬೇಕಿದ್ದ ಹಲವಾರು ಪ್ರಸ್ತಾವನೆಗಳು ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಂದೆ ಇವೆ. ಕಾರ್ಯ ಒತ್ತಡದಿಂದ ಅವುಗಳಿಗೆ ಅನುಮತಿ ನೀಡದ್ದರಿಂದ ಅವುಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ್ದರಿಂದ ಗೆದ್ದರೂ ಪ್ರಯೋಜನವಾಗದಂತೆ ಆಗಿದೆ. ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಸಾಮಾನ್ಯಸಭೆಯ ಅನುಮೋದನೆ ಬೇಕು. ಅಧ್ಯಕ್ಷರ ಆಯ್ಕೆಯಾಗದ ಹೊರತು ಅದು ಆಗುವುದಿಲ್ಲ ಎನ್ನುತ್ತಾರೆ ನಗರಸಭೆ ಸದಸ್ಯ ಕೆರಗೋಡು ಸೋಮಶೇಖರ್.

ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆಗೆ ಸೀಮಿತಗೊಂಡಿದ್ದೇವೆ. ಇವುಗಳನ್ನು ಜನಸಾಮಾನ್ಯರು ದೂರು ನೀಡಿದರೂ ಮಾಡುತ್ತಾರೆ. ಸದಸ್ಯರಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರ ದೂರಿಗೆ ಸ್ಪಂದಿಸಲು ಆಗುತ್ತಿಲ್ಲ. ಆರಂಭದಲ್ಲಿಯೇ ಹೀಗಾದರೆ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT