ADVERTISEMENT

ಮಂಡ್ಯ: ನಗರಸಭೆ ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:45 IST
Last Updated 24 ಫೆಬ್ರುವರಿ 2012, 10:45 IST

ಮಂಡ್ಯ: ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಗುರುವಾರ ಕರೆಯಲು ಉದ್ದೇಶಿಸಿದ್ದ ನಗರಸಭೆಯ ವಿಶೇಷ ಸಭೆ ಕೊನೆಗಳಿಗೆಯಲ್ಲಿ ಕೈ ಬಿಡಲಾಗಿದೆ. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಆಯುಕ್ತರು ಇದಕ್ಕೆ ಸಂಪರ್ಕ ಕೊರತೆಯ ನೆಪ ಹೇಳುತ್ತಿದ್ದರೂ, ಸಭೆ ಸೇರದಿರಲು ಆಡಳಿತರೂಢ ಜೆಡಿಎಸ್‌ನೊಳಗಿನ ಭಿನ್ನಮತವೂ ಕಾರಣ ಎಂದು ಶಂಕಿಸಲಾಗಿದೆ.

ಕಳೆದ ಸಭೆಯಲ್ಲಿನ ಅಹಿತಕರ ಬೆಳವಣಿಗೆ ಬಳಿಕ ಅಧ್ಯಕ್ಷ ಅರುಣ್‌ಕುಮಾರ್ ಅವರು, ಜೆಡಿಎಸ್ ಪಕ್ಷದ ಐವರು ಸದಸ್ಯರನ್ನು ಆರು ತಿಂಗಳ ಅವಧಿಗೆ ಸಭಾ ಕಲಾಪದಿಂದ ಅಮಾನತುಪಡಿಸಲಾಗಿತ್ತು. ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸಭೆ ಕರೆದರೂ ಈ ಬೆಳವಣಿಗೆಯೂ ಸಭೆಯಲ್ಲಿ ಪ್ರತಿಧ್ವನಿಸಬಹುದು ಎಂಬ ಆತಂಕವೂ ಈಗ ಸಭೆಯನ್ನು ಕರೆದಿರಲು ಕಾರಣ ಇರಬಹುದು ಎಂದು ಹೇಳಲಾಗಿದೆ.

ಇದರೊಂದಿಗೆ ಬೇಸಿಗೆ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಬಹುತೇಕ ಬಡಾವಣೆಗಳಲ್ಲಿ ಅಸಮರ್ಪಕ ಕುಡಿಯುವ ನೀರು ಪೂರೈಕೆ, ನೀರಿನ ಕೊರತೆ ಸಮಸ್ಯೆ ಕಂಡುಬಂದಿದೆ. ಆದರೆ, ನೀರಿನ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳ ಬೇಕಾದ ಹೊಣೆಗಾರಿಕೆ ನಗರಸಭೆಯ ಮೇಲಿದ್ದರೂ ಪಕ್ಷದೊಳಗಿನ ಒಳಜಗಳದ ಹಿನ್ನೆಲೆಯಲ್ಲಿ ಮೀನ-ಮೇಷ ಎಣಿಸಲಾಗುತ್ತಿದೆ ಎಂಬುದು ವಿಪರ್ಯಾಸ.

ಈ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ಅವರನ್ನು ಸಂಪರ್ಕಿಸಿದಾಗ, `ಅಧ್ಯಕ್ಷರ ಜೊತೆಗೆ ಚರ್ಚಿಸಿಯೇ 23ರಂದು ಸಭೆ ಕರೆಯಬೇಕು ಎಂದು ನಿರ್ಧಾರ ಮಾಡಿದ್ದೆವು. ವಿಶೇಷ ಸಭೆಯಾದ್ದರಿಂದ ಒಂದು ದಿನ ಮೊದಲು ಸದಸ್ಯರಿಗೆ ಮಾಹಿತಿ ನೀಡಿದ್ದರು ಸಾಕಿತ್ತು. ಆದರೆ,ಜಲಮಂಡಳಿ ಅಧಿಕಾರಿಗಳು ಸಮಯ ಕೇಳಿದ್ದರಿಂದಾಗಿ ಕೊನೆಗಳಿಗೆಯಲ್ಲಿ ಮುಂದೂಡಲಾಯಿತು~ ಎಂದರು.

ಪಕ್ಷದೊಳಗಿನ ಒಳಜಗಳ, ಐವರು ಸದಸ್ಯರ ಅಮಾನತು ಕೂಡಾ ಪರೋಕ್ಷ ಕಾರಣವೇ ಪ್ರಶ್ನೆಗೆ, `ಇಲ್ಲ. ಅದು ಕಾರಣವಲ್ಲ. ಅದು ಕಾರಣವಾದರೆ ನಾವು ಸಭೆಯನ್ನೀ ಕರೆಯಲು ಆಗುವುದಿಲ್ಲ~ ಎಂದರು.

ನೀರಿನ ಸಮಸ್ಯೆ ಚರ್ಚೆಗೆ ಸಭೆ ಕರೆಯುವುದರ ಕುರಿತ ಸಂಪರ್ಕಿಸಿದಾಗ ಆಯುಕ್ತ ಪ್ರಕಾಶ್ ಅವರು, `ಸಭೆ ಕರೆಯಬೇಕು ಎಂದು ಚರ್ಚಿಸಿದ್ದೇವು. ಆದರೆ, ಅಧಿಕೃತವಾಗಿ ಸಭೆ ಕರೆದಿಲ್ಲ~ ಎಂದರು.

ನೀರು ಪೂರೈಕೆ ವ್ಯವಸ್ಥೆಯನ್ನು ಜಲಮಂಡಳಿ ವಹಿಸಿಕೊಂಡ ನಂತರ ಆಗಿರುವ ಪ್ರಗತಿ, ವಸೂಲಾಗಿರುವ ಶುಲ್ಕ, ನೀರು ಪೂರೈಕೆಯಲ್ಲಿ ಇರುವ ತೊಡಕು ಮತ್ತಿತರ ಅಂಶಗಳನ್ನು ಕುರಿತು ಮಾಹಿತಿಯನ್ನು ಕೇಳಿದ್ದೇವೆ. ಇನ್ನೂ ಮಾಹಿತಿ ಕ್ರೋಡೀಕರಣವಾಗಿಲ್ಲ. ಸ್ವಲ್ಪ ಕಾಲಾವಕಾಶ ಕೇಳಿದರು. ಆ ಬಳಿಕವೇ ಸಭೆಯನ್ನು ಕರೆಯಬಹುದು ಎಂದು ಪ್ರತಿಕ್ರಿಯಿಸಿದರು.

ಈ ನಡುವೆ, ನಗರದ ಕೆಲವೆಡೆ ಕುಡಿಯುವ ನೀರು ಲಭ್ಯತೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಬರುವ ದಿನಗಳಲ್ಲಿ ಬೇಸಿಗೆ ಇನ್ನಷ್ಟು ತೀವ್ರಗೊಳ್ಳಲಿರುವ ಕಾರಣ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯೂ ಇದೆ.

ಗುರುವಾರ ಕೂಡಾ ನಗರದ ಹಾಲಹಳ್ಳಿ ಬಡಾವಣೆಗೆ ಹೊಂದಿಕೊಂಡಿರುವ ಟಿಪ್ಪು ಮೊಹಲ್ಲಾದಲ್ಲಿ ಸೈಕಲ್, ತಳ್ಳುಗಾಡಿಯಲ್ಲಿ ನೀರು ಸಾಗಿಸಬೇಕಾದ ಸ್ಥಿತಿ ಕಂಡುಬಂದಿತು. ಈ ಬಡಾವಣೆಯಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನೀರು ಹಿಡಿದಿಟ್ಟು ಕೊಳ್ಳುವುದೇ ಸಮಸ್ಯೆಯಾಗಿದೆ ಎಂದು ಕಾಲೊನಿಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.