ADVERTISEMENT

ಮಂಡ್ಯ ಸಮಗ್ರ ಅಭಿವೃದ್ಧಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:22 IST
Last Updated 19 ಸೆಪ್ಟೆಂಬರ್ 2013, 6:22 IST

ಮಂಡ್ಯ: ‘ಉದ್ಯಾನಗಳಿಗೆ ಕಾಯಕಲ್ಪ, ಶುದ್ಧ ಕುಡಿಯುವ ನೀರು ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಕ್ಕೆ ಒತ್ತು ನೀಡುವುದರ ಜೊತೆಗೆ ಮಂಡ್ಯ ನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿಸುವ ಗುರಿ ಹೊಂದಿದ್ದೇನೆ’ ಎಂದು ನಗರಸಭೆ ನೂತನ ಅಧ್ಯಕ್ಷ ಬಿ.ಸಿದ್ದರಾಜು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ನಗರಸಭೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೂಡಿ ಕೆಲಸ ಮಾಡುವ ಮೂಲಕ ಗುರಿ ತಲುಪುತ್ತೇನೆ ಎನ್ನುವ ವಿಶ್ವಾಸವಿದೆ. ಅಧಿಕಾರದಲ್ಲಿದಷ್ಟು ದಿನ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ’ ಎಂದು ಹೇಳಿದರು.

‘ನಗರದಲ್ಲಿ ಹತ್ತಾರು ಸಮಸ್ಯೆಗಳಿವೆ ಎಂಬುವುದು ನನ್ನ ಅರಿವಿನಲ್ಲಿದೆ. ಈ ಎಲ್ಲ ಸಮಸ್ಯೆಗಳಿಗೂ ಹಂತಹಂತವಾಗಿ ಪರಿಹಾರ ಒದಗಿಸುತ್ತೇನೆ. ರಾಜಕೀಯ ಮುಖಂಡರು, ಬುದ್ಧಿಜೀವಿಗಳು, ನಾಗರಿಕ ಪ್ರಮುಖರು, ಸಂಘಟನೆಗಳ ಮುಖಂಡರುಗಳ ಜೊತೆ ಸಭೆ ನಡೆಸಿ ನಗರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುತ್ತೇನೆ‘ ಎಂದರು.

ವಿದ್ಯುತ್‌ ಚಿತಗಾರ ಸ್ಥಾಪನೆ, ಶವಸಾಗಣೆಗೆ ವಾಹನ ವ್ಯವಸ್ಥೆ, ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣ, ಜನ ದಟ್ಟಣೆ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ, ಬೀಡಾಡಿ ನಾಯಿ, ಹಂದಿಗಳು, ಹಸುಗಳ ಓಡಾಟಕ್ಕೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ನುಡಿದರು.

ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಬೈಪಾಸ್ ರಸ್ತೆ ನಿರ್ಮಾಣ, ಕೊಳೆಗೇರಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಾಗುವುದೆಂದರು.

ಅಧ್ಯಯನ ಶಿಬಿರ: ನಗರಸಭೆಗೆ ಬಹುತೇಕ ಮಂದಿ ಹೊಸದಾಗಿ ಆಯ್ಕೆ ಆಗಿರುವುದರಿಂದ ಸದಸ್ಯರ ಜವಾಬ್ದಾರಿ ಏನು? ಸಭಾ ನಡವಳಿಕೆ, ಯೋಜನೆಗಳು ಸೇರಿದಂತೆ ಹತ್ತಾರು ವಿಷಯಗಳ ಬಗೆಗೆ ಜ್ಞಾನ ಪಡೆದುಕೊಳ್ಳಬೇಕಿರುವುದರಿಂದ ಅಧ್ಯಯನ ಶಿಬಿರವನ್ನು ಶೀಘ್ರದಲ್ಲೇ ಆಯೋಜಿಸುವ ಉದ್ದೇಶವಿದೆ ಎಂದರು. ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ರಾಜೇಶ್‌, ನಲ್ಲಣ್ಣ, ರಾಮಲಿಂಗು, ನಯಾಜ್‌ ಪಾಷ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.