ಮಂಡ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್ ಕಾರ್ಡ್ ವಿತರಣೆ ಕಾರ್ಯ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ. ಇಲ್ಲಿಯವರೆಗೆ ಶೇ 18 ರಷ್ಟು ಜನರಿಗೆ ಮಾತ್ರ ವಿತರಿಸಲಾಗಿದೆ. ಪರಿಣಾಮ ಆಧಾರ್ ಕಾರ್ಡ್‌ಗಾಗಿ ಜನರು ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ವಿತರಣೆ ಕಾರ್ಯ ಎರಡು ವರ್ಷದಿಂದ ನಡೆಯುತ್ತಿದೆ. ಮೊದಲ ಏಜೆನ್ಸಿ ತೆಗೆದುಹಾಕಿ, ಮತ್ತೊಂದು ಏಜೆನ್ಸಿಗೆ ಅವಕಾಶ ನೀಡಲಾಗಿದೆ. ಆದರೆ, ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ಮಂಡ್ಯ, ಪಾಂಡವಪುರ, ಮಳವಳ್ಳಿ ಹಾಗೂ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಆಧಾರ ಕಾರ್ಡ್ ವಿತರಣೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ 40 ಕೇಂದ್ರಗಳನ್ನು ತೆರೆಯಬೇಕಾಗಿತ್ತು. ಇಲ್ಲಿಯವರೆಗೆ 23 ಕೇಂದ್ರಗಳನ್ನು ಮಾತ್ರ ತೆರೆಯಲಾಗಿದೆ.
ಮಂಡ್ಯ ತಾಲ್ಲೂಕಿನಲ್ಲಿ 10 ಕೇಂದ್ರಗಳನ್ನು ತೆರೆಯಲಾಗಿದ್ದರೆ, ಉಳಿದ ತಾಲ್ಲೂಕುಗಳಲ್ಲಿ ಒಂದೆರಡು ಕೇಂದ್ರಗಳನ್ನು ಮಾತ್ರ ತೆರೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಗ್ಯಾಸ್ ಏಜೆನ್ಸಿಯವರು ಆಧಾರ್ ಕಾರ್ಡ್ ಸಂಖ್ಯೆ ಕೇಳಲಾರಂಭಿಸಿದ್ದಾರೆ. ಪರಿಣಾಮ ಜನರು ಕಾರ್ಡ್‌ಗಾಗಿ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ನೂಕುನುಗ್ಗಲು ಉಂಟಾಗುತ್ತಿದೆ.
ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ 8 ಗಂಟೆ ವೇಳೆಗೆ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಕೆಲವರಿಗೆ ಸಂಜೆಯಾದರೂ ಕಾರ್ಡ್ ಸಿಗುವುದಿಲ್ಲ. ನಿರಾಶರಾಗಿ ಮನೆಗೆ ಮರಳ ಬೇಕಾದ ಸ್ಥಿತಿ ಇದೆ.
ಏಜೆನ್ಸಿ ಬದಲಾವಣೆ: ಈ ಹಿಂದಿನ ಏಜೆನ್ಸಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಕಿತ್ತು ಹಾಕಿ, ಈಗ ಹೈದರಾಬಾದ್ ಮೂಲದ ಶ್ರೀವೆನ್ ಇನ್ಫೋ ಡಾಟ್ ಕಾಮ್ ಲಿಮಿಟೆಡ್‌ಗೆ ನೀಡಲಾಗಿದೆ. ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಅವರಿಗೆ ವಿತರಣೆ ಮಾಡಲು ಸಾಧ್ಯವಾಗಿದ್ದು ಕೇವಲ 94 ಸಾವಿರ ಜನರಿಗೆ ಮಾತ್ರ.
2001ರ ಜನಗಣತಿ ಪ್ರಕಾರ ಜಿಲ್ಲೆಯ 17.55 ಲಕ್ಷ ಜನರಿಗೆ ಕಾರ್ಡ್ ವಿತರಿಸಬೇಕು. ಈಗ ಕೇವಲ 3.20 ಲಕ್ಷ ಜನರಿಗೆ ಮಾತ್ರ ವಿತರಿಸಲಾಗಿದೆ. ವರ್ಷದ ಅಂತ್ಯಕ್ಕೆ ಉಳಿದ 14.35 ಲಕ್ಷ ಜನರಿಗೆ ವಿತರಿಸಬೇಕಾದ ಸವಾಲು ಮುಂದಿದೆ.
ಸಿಬ್ಬಂದಿ ಕೊರತೆ: ಆಧಾರ್ ಕಾರ್ಡ್ ಪಡೆಯಲು ಬರುವ ಸಾರ್ವಜನಿಕರ ದಾಖಲೆಗಳನ್ನು ಸರ್ಕಾರದ ಅಧಿಕಾರಿಗಳು ಪರಿಶೀಲಿಸಿ, ಖಚಿತ ಪಡಿಸಬೇಕು. ಈ ಕಾರ್ಯಕ್ಕಾಗಿ ಪ್ರತಿ ಕೇಂದ್ರಕ್ಕೆ ಇಬ್ಬರು ಅಧಿಕಾರಿಗಳು ಬೇಕು.
ಕಂದಾಯ ಇಲಾಖೆಯು ಕೇಂದ್ರಕ್ಕೆ ಬೇಕಾದ ಅಧಿಕಾರಿಗಳನ್ನು ನೀಡುತ್ತಿಲ್ಲ. ನಾಲ್ಕು ದಿನ ಬಂದವರು ಐದನೇ ದಿನಕ್ಕೆ ಹೋಗಿ ಬಿಡುತ್ತಾರೆ. ಪರಿಶೀಲನೆ ಮಾಡಿಕೊಡದಿದ್ದರೆ ಕಾರ್ಡ್ ನೀಡಲು ಸಾಧ್ಯವಿಲ್ಲ. ವಿಳಂಬಕ್ಕೆ ಅದೂ ಒಂದು ಕಾರಣವಾಗಿದೆ ಎಂದು ದೂರುತ್ತಾರೆ ಅಧಿಕಾರಿಯೊಬ್ಬರು.
ಪ್ರಚಾರದ ಕೊರತೆ: ಕಾರ್ಡ್ ವಿತರಣೆಯ ಕೇಂದ್ರಗಳನ್ನು ಎಲ್ಲೆಲ್ಲಿ ತೆರೆಯಲಾಗಿದೆ ಮಾಹಿತಿಗೆ ಪ್ರಚಾರ ನೀಡುತ್ತಿಲ್ಲ. ಹಾಗಾಗಿ ಜನ ಮಾಹಿತಿ ಕೊರತೆಯಿಂದ ಪರದಾಡುತ್ತಿದ್ದಾರೆ. ಕಾರ್ಡ್ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಏಜೆನ್ಸಿಯವರಿಗೆ ಸೂಚಿಸಿದ್ದೇನೆ. ಕೇಂದ್ರಗಳ ಬಗೆಗೂ ಪ್ರಚಾರ ನೀಡಲಾಗುವುದು ಎನ್ನುತ್ತಾರೆ ನೋಡೆಲ್ ಅಧಿಕಾರಿ ವೆಂಕಟರಮಣರೆಡ್ಡಿ.
ಬೆಳಿಗ್ಗೆ 8 ಗಂಟೆಗೆ ಕಾರ್ಡ್ ಪಡೆಯಲು ಕುಟುಂಬದ ಸದಸ್ಯರೆಲ್ಲ ಬಂದಿದ್ದೇವೆ. ಮಧ್ಯಾಹ್ನ ಮೂರು ಗಂಟೆಯಾದರೂ ಸಿಕ್ಕಿಲ್ಲ. ಇಂದು ಸಿಗುವುದೋ, ಇಲ್ಲೋ ಗೊತ್ತಿಲ್ಲ. ಸಿಗದಿದ್ದರೆ ಮತ್ತೆ ನಾಳೆಗೆ ಬರಬೇಕಾಗುತ್ತದೆ. ಕೇಂದ್ರಗಳನ್ನು ಹೆಚ್ಚಿಸಬೇಕು ಎನ್ನುತ್ತಾರೆ ಅಂಚೆ ಕಚೇರಿ ಬಳಿ ಸಾಲಿನಲ್ಲಿ ನಿಂತಿದ್ದ ಸ್ವರ್ಣಸಂದ್ರ ನಿವಾಸಿ ರಮೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.