ADVERTISEMENT

ಮಕ್ಕಳ ಪ್ರತಿಭೆಗೆ ಸಾಕ್ಷಿಯಾದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:40 IST
Last Updated 11 ಡಿಸೆಂಬರ್ 2013, 8:40 IST

ಪಾಂಡವಪುರ: ಜೇಡಿಮಣ್ಣಿನಲ್ಲಿ ಜೀವ ಪಡೆದ ಮೊಸಳೆ, ತಪಸ್ಸಿಗೆ ಕುಳಿತ ಋಷಿ, ಕುಣಿಯುತ್ತಿದ್ದ ನವಿಲು, ಬಸವ, ಶಿವಲಿಂಗ ಜತೆಗೆ ಮನಸೆಳೆವ ಜಡೆ ಕೋಲಾಟ, ಕೊಡೆ ಕೋಲಾಟ, ಡೊಳ್ಳು ಕುಣಿತ, ಪಟಕುಣಿತ, ವೀರಗಾಸೆ, ಛದ್ಮವೇಶ ಸೇರಿದಂತೆ ಹಲವು ಕಲಾಪ್ರಕಾರಗಳನ್ನು ತಾಲ್ಲೂಕಿನ ವಿವಿಧ ಶಾಲೆಗಳಿಂದ ಬಂದಿದ್ದ ಮಕ್ಕಳು ತಮ್ಮ ಅಗಾಧ ಪ್ರತಿಭೆಯನ್ನು ಪ್ರತಿಭಾ ಕಾರಂಜಿಯಲ್ಲಿ ಪ್ರದರ್ಶಿಸಿ ಗಮನಸೆಳೆದರು.

ತಾಲ್ಲೂಕಿನ ಕುಂತಿ ಬೆಟ್ಟದಲ್ಲಿನ ಶ್ರೀ ಶಂಕರಾನಂದ ವಿದ್ಯಾಪೀಠದ ಕುವೆಂಪು ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ತಮ್ಮಲ್ಲಿರುವ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಹಳೆ ದಿನಪತ್ರಿಕೆಗಳಿಂದ ಮಾಡಿದ ಸ್ಕರ್ಟ್ ಧರಿಸಿದ್ದ ಬಾಲಕಿ ಹಾಗೂ ಕುಬ್ಜ ವ್ಯಕ್ತಿಯ ಛದ್ಮವೇಶ ಧರಿಸಿದ ಬಾಲಕ ಮೆಚ್ಚುಗೆಗೆ ಪಾತ್ರವಾದರು. ಆಶುಭಾಷಣ,  ಸ್ಪರ್ಧೆ, ಹಾಡುಗಾರಿಕೆ,,, ಹೀಗೆ ಹತ್ತು ಹಲವಾರು ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಜನಮನ ಸೂರೆಗೊಂಡವು.

ಪ್ರತಿಭಾ ಕಾರಂಜಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಮಕ್ಕಳಲ್ಲಿ  ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಿ, ಭಾವೈಕ್ಯ ಬೆಳೆದು ಮಕ್ಕಳು ವಿಶ್ವಮಾನವರಾಗಿ ಬೆಳೆಯುತ್ತಾರೆ ಎಂದರು.

ಆದಿತ್ಯಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ. ವಸಂತಪ್ರಕಾಶ್, ಎ.ಎಲ್. ಕೆಂಪೂಗೌಡ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಎಸ್.  ಶಾಮಣ್ಣ, ಬಿಇಒ ಚಂದ್ರಶೇಖರ್, ಬಿಆರ್ ಸಿ ಅಧಿಕಾರಿ ಧನಂಜಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್.ಆರ್. ಧನ್ಯಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಲ್ಲಿಕಾರ್ಜುನಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.