ADVERTISEMENT

ಮತದಾರರ ಪಟ್ಟಿ: ಪರಿಷ್ಕರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 10:35 IST
Last Updated 3 ನವೆಂಬರ್ 2012, 10:35 IST

ಭಾರತೀನಗರ: ಮತದಾರರ ಪಟ್ಟಿಗೆ ಅರ್ಹರನ್ನು ಸೇರಿಸುವ ಕೆಲಸ ಸಮರ್ಪಕವಾಗಿ ನಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ರಾಮಕೃಷ್ಣ ಸಲಹೆ ನೀಡಿದರು.ಸಮೀಪದ ಎಸ್.ಐ.ಹೊನ್ನಲಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಂಡಿರುವ ಭಾರತ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಅನೇಕ ಮತದಾರರ ಹೆಸರು ಪಟ್ಟಿಯಲ್ಲಿ ಇರುವುದಿಲ್ಲ. 18 ವರ್ಷ ತುಂಬಿದ ಮತದಾರ ಹೆಸರು ಪಟ್ಟಿಯಲ್ಲಿ ಸಿಗುವುದಿಲ್ಲ. ಇಂತಹ ಲೋಪದೋಷಗಳನ್ನು ಸರಿಪಡಿಸಲು ಚುನಾವಣಾ ಆಯೋಗ ಮತದಾರರ ಕರಡು ಪರಿಷ್ಕರಣೆ, ಹೊಸ ನೋಂದಣಿಗೆ ಚಾಲನೆ ನೀಡಿದೆ. ಈ ಕುರಿತು ಸಾರ್ವಜನಿಕರು ಆಸಕ್ತಿ ವಹಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಯಾ ಗ್ರಾಮದಲ್ಲಿ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದರು.

ಈ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಕಟ್ಟಡ ಇಲ್ಲದೇ ಆಡಳಿತ ನಡೆಸುವುದು ಕಷ್ಟವಾಗಿತ್ತು. ಇತ್ತೀಚಿನ ಸರ್ಕಾರ ಸ್ಥಳೀಯ ಪಂಚಾಯಿತಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರಗಳು ನಿರ್ಮಾಣವಾಗುತ್ತಿದ್ದು, ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ಆರಂಭಿಸಬೇಕು ಎಂದರು.

ಶಾಸಕಿ ಕಲ್ಪನಾ ಸಿದ್ದರಾಜು ಮಾತನಾಡಿ, ಎಲ್ಲ ಕೆಲಸಗಳ ಕುರಿತು ಶಾಸಕರು ನಿಗಾ ವಹಿಸಲು ಸಾಧ್ಯವಿಲ್ಲ. ಸರ್ಕಾರದ ವತಿಯಿಂದ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾವಹಿಸಬೇಕು. ಲೋಪ ಕಂಡು ಬಂದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಹೊನ್ನಲಗೆರೆ ವೆಂಕಟೇಶ್, ಉಪಾಧ್ಯಕ್ಷ ಪುಟ್ಟೇಗೌಡ, ಗ್ರಾಮ ಪಂಚಾಯಿತಿ ನೋಡೆಲ್ ಅಧಿಕಾರಿ ಡಾ.ಎಂ.ಕೃಷ್ಣಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.