ADVERTISEMENT

ಮತದಾರರ ಸೆಳೆಯಲು ಬಹುರೂಪಿ ಪ್ರಚಾರ‌

ಎಂ.ಶ್ರೀನಿವಾಸ್‌ ಪರ ಪ್ರಚಾರಕ್ಕೆ ಧಾರಾವಾಹಿ ಕಲಾವಿದರ ದಂಡು, ವಿಶೇಷ ವಾಹನದಲ್ಲಿ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:28 IST
Last Updated 28 ಏಪ್ರಿಲ್ 2018, 12:28 IST
ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧಗೊಂಡಿರುವ ಪ್ರಚಾರ ವಾಹನ
ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧಗೊಂಡಿರುವ ಪ್ರಚಾರ ವಾಹನ   

ಮಂಡ್ಯ: ನಾಮಪತ್ರ ಹಿಂಪಡೆಯುವ ಪಕ್ರಿಯೆ ಮುಗಿದಿದೆ. ಈಗ ಹೋರಾಟಕ್ಕೆ ಕಣ ಸಿದ್ಧಗೊಂಡಿದ್ದು ಎಲ್ಲ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ವಿಶೇಷ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ. ಪ್ರಚಾರ ಕಾರ್ಯಕ್ಕೆ ವಿಶೇಷ ವಾಹನಗಳು ವಿನ್ಯಾಸಗೊಂಡಿದ್ದು ರಸ್ತೆಗಿಳಿಯಲು ಸಿದ್ಧಗೊಂಡಿವೆ.

ಪ್ರಚಾರ ಕಾರ್ಯದಲ್ಲಿ ಎಲ್ಲ ಪಕ್ಷಗಳಿಗಿಂತಲೂ ಜೆಡಿಎಸ್‌ ಮುಂದಿದೆ. ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ರೋಡ್‌ ಷೋ ನಡೆಸಲು ಈಗಾಗಲೇ ವಿಶೇಷ ವಾಹನ ಸಿದ್ಧಗೊಂಡಿದ್ದು ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ. ಹಸಿರು ಬಣ್ಣದಲ್ಲಿ ವಾಹನವನ್ನು ಅದ್ದಿ ತೆಗೆದಂತೆ ರೂಪಿಸಲಾಗಿದೆ. ತೆನೆಹೊತ್ತ ಮಹಿಳೆ, ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ಎಂ.ಶ್ರೀನಿವಾಸ್‌ ಅವರ ಚಿತ್ರದೊಂದಿಗೆ ವಿನ್ಯಾಸ ಮಾಡಲಾಗಿದೆ. ನಾಮಪತ್ರ ಸಲ್ಲಿಸುವ ದಿನವೇ ವಾಹನ ರಸ್ತೆಗಿಳಿದಿದೆ.

‘ಈ ಬಾರಿ ಎಲ್ಲ ಮುಖಂಡರು ಒಟ್ಟಾಗಿ ಹೋಗಿ ಪ್ರಚಾರ ಮಾಡುವುದಿಲ್ಲ. ವಿವಿಧ ಗುಂಪುಗಳಾಗಿ ವಿಂಗಡಿಸಿ ಎಲ್ಲರೂ ಬೇರೆ ಬೇರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿಲಿದ್ದಾರೆ. ಹೋಬಳಿ ಮಟ್ಟದಲ್ಲಿ ಹೋಬಳಿ ಪ್ರಚಾರ ಸಮಿತಿ ರಚನೆ ಮಾಡಲಾಗಿದೆ. ಅವರು ಅಲ್ಲಿ ಮನೆಮನೆ ಪ್ರಚಾರ ಮಾಡುವರು. ಯುವ ಘಟಕದಿಂದ ಯುವಜನರ ಗಮನ ಸೆಳೆಯಲಾಗುವುದು’ ಎಂದು ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಯೋಗೇಶ್‌ ಹೇಳಿದರು.

ADVERTISEMENT

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಮುಖಂಡರೂ ಇದೇ ಮಾದರಿಯ ತೆರೆದ ವಾಹನಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಕೆ.ಆರ್‌.ಪೇಟೆ, ಮಳವಳ್ಳಿ, ಮೇಲುಕೋಟೆ, ಮದ್ದೂರು, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲೂ ಎಲ್ಲ ಪಕ್ಷಗಳ ಮುಖಂಡರು ವಿಶೇಷ ವಾಹನಗಳ ಮೂಲಕ ಜನರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಈ ರೀತಿಯ ವಾಹನ ಸಂಚಾರಕ್ಕೆ ಚುನಾವಣಾಧಿಕಾರಿಯಿಂದ ಅನುಮತಿ ಪಡೆದಿದ್ದಾರೆ.

ಜೆಡಿಎಸ್‌ ಪರ ಧಾರಾವಾಹಿ ನಟರು: ಮಂಡ್ಯ ಕ್ಷೇತ್ರದಲ್ಲಿ ಎಂ.ಶ್ರೀನಿವಾಸ್‌ ಪರ ಪ್ರಚಾರ ಮಾಡಲು ಧಾರಾವಾಹಿ ದಿಗ್ಗಜರು ನಗರಕ್ಕೆ ಬರುತ್ತಿದ್ದಾರೆ. ಶ್ರೀನಿವಾಸ್‌ ಅಳಿಯನೂ ಆದ ಕಿರುತೆರೆ ನಟ, ನಿರ್ದೇಶಕ ವಿಶಾಲ್‌ ರಘು ಈಗಾಗಲೇ ನಗರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಜೊತೆಗೆ ನಟ, ನಟಿಯರ ಒಂದು ತಂಡವನ್ನೇ ಕರೆತಂದು ವಿವಿಧೆಡೆ ರೋಡ್‌ ಷೋ ಮಾಡಲಿದ್ದಾರೆ. ‘ಜೋಡಿ ಹಕ್ಕಿ ಧಾರಾವಾಹಿಯ ನಾಯಕ ನಟ ತಾಂಡವ್‌, ಬಿಗ್‌ಬಾಸ್‌ ಖ್ಯಾತಿಯ ನಟಿ ಅನುಪಮಾ, ವಿದ್ಯಾ ವಿನಾಯಕ ಧಾರಾವಾಹಿಯ ನಟರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಬೆಳಿಗ್ಗೆ ವೇಳೆ ಉದ್ಯಾನದಲ್ಲಿ ವಿಹಾರ ಮಾಡುವ ಜನರ ಬಳಿ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಸಂಜೆ ಹಳ್ಳಿಗಳಿಗೆ ಮನೆಮನೆ ಪ್ರಚಾರ ಮಾಡುತ್ತಿದ್ದೇವೆ’ ಎಂದು ನಟ ವಿಶಾಲ್‌ ರಘು ತಿಳಿಸಿದರು.

ಬಿಜೆಪಿಯಿಂದ ಎಂಟು ತಂಡ ರಚನೆ: ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ ಅವರ ಪರ ಪ್ರಚಾರ ಮಾಡಲು ಸ್ಥಳೀಯ ಬಿಜೆಪಿ ಮುಖಂಡರು ಎಂಟು ತಂಡ ರಚನೆ ಮಾಡಿದ್ದಾರೆ. ಜಿಲ್ಲೆಯಲ್ಲಿರುವ ವಿವಿಧ ಎಂಟು ಮೋರ್ಚಾಗಳನ್ನೇ ತಂಡಗಳನ್ನಾಗಿ ರಚಿಸಲಾಗಿದೆ.

ರೈತ ಮೋರ್ಚಾ, ಎಸ್‌ಸಿ, ಎಸ್‌.ಟಿ, ಮಹಿಳಾ, ಅಲ್ಪಸಂಖ್ಯಾತ ಮೋರ್ಚಾ ಸೇರಿ ವಿವಿಧ ಘಟಕಗಳ ಮುಖಂಡರ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಎಲ್ಲರೂ ಒಂದೊಂದೆಡೆ ತಂಡೋಪತಂಡವಾಗಿ ಪ್ರಚಾರ ನಡೆಸುತ್ತಿದ್ದಾರೆ.

‘ಪಕ್ಷದ ಎಲ್ಲ ಮುಖಂಡರು ಸಂಘಟಿತರಾಗಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲ ತಂಡಗಳಿಗೂ ಒಂದೊಂದು ತೆರೆದ ವಾಹನ ರೂಪಿಸಿದ್ದೇವೆ. ಆ ಮೂಲಕ ಅವರು ರೋಡ್‌ ಷೋ ನಡೆಸಲಿದ್ದಾರೆ. ಮುಂದಿನ ವಾರ ರಾಜ್ಯಮಟ್ಟದ ಮುಖಂಡರೂ ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಬಿಜೆಪಿ ಮುಖಂಡ ಎಚ್‌.ಅರವಿಂದ್‌ ಹೇಳಿದರು.

ಪ್ರಚಾರದಲ್ಲಿ ಹಿಂದೆ ಬಿದ್ದ ಕಾಂಗ್ರೆಸ್‌: ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಖಂಡರು ಭರದಿಂದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮಂಡ್ಯ ಕ್ಷೇತ್ರದಲ್ಲಿ ಇನ್ನೂ ಸಮಗ್ರ ಪ್ರಚಾರ ಕಾರ್ಯ ಆರಂಭವಾಗಿಲ್ಲ. ಹಿರಿಯ ಮುಖಂಡರು ಗಣಿಗ ಪಿ ರವಿಕುಮಾರ್‌ಗೌಡ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಮುನಿಸು ಮುಂದುವರಿದಿರುವ ಕಾರಣ ಇನ್ನೂ ಸರಿಯಾಗಿ ಪ್ರಚಾರ ಕಾರ್ಯ ಆರಂಭವಾಗಿಲ್ಲ.

‘ವರಿಷ್ಠರು ನಮ್ಮನ್ನು ಕರೆದು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವವರೆಗೂ ಯಾವುದೇ ಪ್ರಚಾರ ಮಾಡುವುದಿಲ್ಲ. ಅಂಬರೀಷ್‌ ಟಿಕೆಟ್‌ ನಿರಾಕರಿಸಿದರೆ ನಿಷ್ಠಾವಂತರಿಗೆ ಟಿಕೆಟ್‌ ನಿಡುವುದಾಗಿ ಭರವಸೆ ನೀಡಿದ್ದ ಮುಖಂಡರು ಈಗ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೂ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಚಿದಂಬರ್‌ ಹೇಳಿದರು.

ಪ್ರಚಾರ ಸ್ಥಳದಲ್ಲೇ ₹ 5 ವೈದ್ಯರ ಚಿಕಿತ್ಸೆ

ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಪ್ರಚಾರ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಯಾವುದೇ ಹಳ್ಳಿಗೆ ಹೋದರೂ ರೋಗಿಗಳು ಆರೋಗ್ಯ ತಪಾಸಣೆ ನಡೆಸುವಂತೆ ದುಂಬಾಲು ಬೀಳುತ್ತಿದ್ದಾರೆ. ವೈದ್ಯರು ಪ್ರೀತಿಯಿಂದಲೇ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

‘ನಾನು ಚುನಾವಣಾ ಪ್ರಚಾರದಲ್ಲಿ ಮಗ್ನನಾಗಿರುವ ಕಾರಣ ಕ್ಲಿನಿಕ್‌ ತೆರೆಯಲು ಸಾಧ್ಯವಾಗಿಲ್ಲ. ರೋಗಿಗಳು ಪ್ರಚಾರ ಸ್ಥಳಕ್ಕೇ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ₹ 5 ಕೊಟ್ಟರೆ ಪಡೆಯುತ್ತೇನೆ. ಇಲ್ಲದಿದ್ದರೆ ಉಚಿತವಾಗಿ ತಪಾಸಣೆ ಮಾಡುತ್ತಿದ್ದೇನೆ’ ಎಂದು ಡಾ.ಎಸ್‌.ಸಿ.ಶಂಕರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.