ADVERTISEMENT

ಮಳವಳ್ಳಿಯಲ್ಲಿ ನೀರು ಪೂರೈಕೆ ಸ್ಥಗಿತ: ಪರದಾಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:35 IST
Last Updated 15 ಮಾರ್ಚ್ 2011, 8:35 IST

ಮಳವಳ್ಳಿ: ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೆ ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಪಟ್ಟಣಕ್ಕೆ ಸುಮಾರು 20 ಕಿ.ಮೀ. ದೂರದ ಶಿವನಸಮುದ್ರದ ಬಳಿಯಿಂದ ನೀರು ಸರಬರಾಜಾಗುತ್ತದೆ. ಕಾವೇರಿ ನದಿಯಿಂದ ಅಳವಡಿಸಿರುವ ನೀರಿನ ಮುಖ್ಯ ಪೈಪ್ ಅಲ್ಲಲ್ಲಿ ಒಡೆದು ಸೋರಿಕೆ ಆಗುತ್ತಿರುವುದು ಈ ಅಭಾವಕ್ಕೆ ಕಾರಣ.

ಇದರಿಂದ ಸಮರ್ಪಕವಾಗಿ ನೀರು ಪಂಪ್‌ಹೌಸ್‌ಗೆ ಪೂರೈಕೆಯಾಗದೆ ಸಾರ್ವಜನಿಕ ರಿಗೆ ಕುಡಿಯುವ ನೀರು ದೊರೆಯುವಲ್ಲಿ ವ್ಯತ್ಯಯವಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ ಪೈಪ್ ಅಳವಡಿಸಿದ್ದರೂ ಉತ್ತಮವಾದ ಪೈಪ್ ಅಳವಡಿಸಿದ ಹಿನ್ನೆಲೆ ಯಲ್ಲಿ ಪದೆ ಪದೇ ಪೈಪ್‌ಗಳು ಒಡೆದು ನೀರು ಸೋರಿಕೆ ಯಾಗುತ್ತಿದೆ ಎಂಬುದು ಗಮನಾರ್ಹ.

ಒಡೆದು ಹೋದ ಪೈಪ್‌ನ್ನು ದುರಸ್ತಿ ಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನೀರು ಪೂರೈಕೆ ಬೇಗನೆ ಆಗುತ್ತಿಲ್ಲ. ಹಿಂದೆ ಎಂಎಸ್ ಪೈಪ್ ಅಳವಡಿಸದೆ ಸಿಮೆಂಟ್ ಕಾಂಕ್ರಿಟ್ ಪೈಪ್‌ನ್ನು ಅಳವಡಿಸಿರು ವುದರಿಂದ ಪೈಪ್‌ಲೈನ್ ಒಡೆದು ಹೋಗುತ್ತಿದೆ ಎನ್ನಲಾಗಿದೆ.ಸುಮಾರು 20 ಕಡೆ ಪೈಪ್ ಒಡೆದಿದ್ದು, ಒಂದೆರಡು ಕಡೆ ಪಂಪ್ ಮಾಡಿದ ನೀರು ಒಡೆದ ಪೈಪ್‌ನಿಂದ ಎಸ್‌ಪಿವಿ ಕೆರೆಯ ಪಾಲಾಗುತ್ತದೆ. ಪಂಪ್ ಹೌಸ್‌ಗೆ ಸಮರ್ಪಕ ವಾಗಿ ನೀರು ಪೂರೈಕೆಯಾಗದೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗದೆ ಉರಿ ಬಿಸಿಲಿನಲ್ಲೂ ಕೆಲವು ಕಡೆ ಕೈಪಂಪ್‌ಗೆ  ಮೊರೆ ಹೋಗಬೇಕಿದೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪುರಸಭೆ ಆಡಳಿತ ತಾತ್ಸಾರ ನೀತಿ ಅನುಸರಿಸುತ್ತಿದೆ. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಜಿಲ್ಲಾಡಳಿತ ಸಭೆ ಕರೆದು ಚರ್ಚಿಸಿ ಆದೇಶ ನೀಡಿದ್ದರೂ, ಪುರಸಭೆಯವರು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಜನರು ಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಎರಡು ದಿನಗಳಿಂದ ನಗರನೀರು ಸರಬರಾಜು ಮಂಡಳಿಯವರು ಪೈಪ್‌ಗಳನ್ನು ದುರಸ್ತಿಗೊಳಿಸುತ್ತಿದ್ದಾರೆ.

ಇನ್ನೂ ಎರಡು ದಿನಗಳು ಕುಡಿಯುವ ನೀರು ಪೂರೈಕೆ ತಾತ್ಕಾಲಿಕವಾಗಿ ಸರಿಹೋಗಬಹುದು. ಒಡೆದಿರುವ ಕಡೆ ದುರಸ್ತಿಗೊಳಿಸಿದರೆ ಮತ್ತೊಂದು ಕಡೆ ಪೈಪ್ ಒಡೆದು ಹೋಗು ವುದು ಸಾಮಾನ್ಯವಾಗಿದೆ.ಶಿವನಸಮುದ್ರದ ಬಳಿಯಿಂದಲೇ ಮದ್ದೂರಿಗೆ 50 ಕಿ.ಮೀ.ದೂರಕ್ಕೆ ನೀರು ಸರಬರಾಜಾಗುತ್ತಿದ್ದು, ಇದುವರೆಗೂ ಈ ಸಮಸ್ಯೆ ಎದುರಾಗದೆ ಇರುವುದು ಪಟ್ಟಣಕ್ಕೆ ಸರಬರಾಜು ಮಾಡುವ ಕಾಮಗಾರಿ ಗುಣಮಟ್ಟ ಪ್ರದರ್ಶಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.