ADVERTISEMENT

ಮಹದೇಶ್ವರರ ಜ್ಯೋತಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:33 IST
Last Updated 24 ಸೆಪ್ಟೆಂಬರ್ 2013, 5:33 IST

ಕೃಷ್ಣರಾಜಪೇಟೆ : ತಾಲ್ಲೂಕಿನ ಅಂಬಿಗರಹಳ್ಳಿ, ಸಂಗಾಪುರ ಮತ್ತು ಪುರ ಗ್ರಾಮಗಳ ಸಮೀಪವಿರುವ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಪೂರ್ಣ ಕುಂಭಮೇಳ ಮತ್ತು ಮಲೆ ಮಹದೇಶ್ವರರ ಜಯಂತಿಯ ಅಂಗವಾಗಿ ಬರುತ್ತಿರುವ ಮಹದೇಶ್ವರ ಜ್ಯೋತಿಯು ಸೋಮವಾರ ತಾಲ್ಲೂಕಿಗೆ ಆಗಮಿಸಿತು.

ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಸೆಪ್ಟೆಂಬರ್‌ 25 ಮತ್ತು 26ರಂದು ಇದೇ ಮೊದಲ ಬಾರಿಗೆ ಪೂರ್ಣ ಕುಂಭಮೇಳ ನಡೆಯುತ್ತಿದೆ. ಜೊತೆಗೆ ಪವಾಡಪುರುಷ ಎಂದೇ ಈ ಭಾಗದಲ್ಲಿ ಖ್ಯಾತಿ ಗಳಿಸಿರುವ ಮಲೆಮಹದೇಶ್ವರ ಸ್ವಾಮಿಯ ಜಯಂತೋತ್ಸವವು ಸಹ ಇದೇ ಸಂದರ್ಭದಲ್ಲಿ  ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ  ಮಲೆ ಮಹದೇಶ್ವರ ಬೆಟ್ಟದಿಂದ ಮಹದೇಶ್ವರ ಜ್ಯೋತಿಯ ಯಾತ್ರೆಯನ್ನು ಆರಂಭಿಸಲಾಗಿದೆ. ವಿವಿಧ ತಾಲ್ಲೂಕುಗಳ ಮೂಲಕ ಹಾದು ಬರುತ್ತಿರುವ ಜ್ಯೋತಿ ಸೋಮವಾರ ಕುಂಭಮೇಳ ಯೋಜನೆಗೊಂಡಿರುವ ಕೃಷ್ಣರಾಜ­ಪೇಟೆ ತಾಲ್ಲೂಕನ್ನು ಪ್ರವೇಶಿಸಿತು.

ಸಂತೇಬಾಚಹಳ್ಳಿ ಗ್ರಾಮದ ಮೂಲಕ ತಾಲ್ಲೂಕನ್ನು ಪ್ರವೇಶಿಸಿದ ಜ್ಯೋತಿಯನ್ನು ತಾಲ್ಲೂಕಿನ ಜನತೆಯ ಪರವಾಗಿ ಆದಿ ಚುಂಚನಗಿರಿ ಮಠದ ಹೇಮಗಿರಿ ಶಾಖೆಯ ಲಕ್ಷ್ಮೀನಾರಾಯಣನಾಥ ಸ್ವಾಮೀಜಿ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ತಾಲ್ಲೂಕಿನ ಎಲ್ಲ ಭಾಗದ ಜನರು ತಪ್ಪದೇ ಕುಂಭಮೇಳದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಕುಂಭಮೇಳ ಆಚರಣಾ ಸಮಿತಿ ಕಾರ್ಯದರ್ಶಿ ಅಂ.ಚಿ. ಸಣ್ಣಸ್ವಾಮಿ­ಗೌಡ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್‌, ಗೆಳೆಯರ ಬಳಗದ ಅಧ್ಯಕ್ಷ ಜಯಕುಮಾರ್‌­ಗೌಡ  ಮತ್ತಿತರರು ಇದ್ದರು. ಜ್ಯೋತಿಯ ಯಾತ್ರೆ ಕುಂಭಮೇಳದ ಮುನ್ನಾ ದಿನವಾದ ಸೆಪ್ಟೆಂಬರ್‌ 24ರಂದು ಸಂಗಮ ಕ್ಷೇತ್ರವನ್ನು ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.