ADVERTISEMENT

ಮಹದೇಶ್ವರಸ್ವಾಮಿ ಜಾತ್ರೆಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 9:10 IST
Last Updated 18 ನವೆಂಬರ್ 2012, 9:10 IST

ಪಾಂಡವಪುರ: ತಾಲ್ಲೂಕಿನ ಕ್ಯಾತನಹಳ್ಳಿಯ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.71ನೇ ವರ್ಷದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸ್ವಾಮಿಗೆ ಪೂಜೆ ಪುನಸ್ಕಾರ ಜರುಗಿತು. ದೇವಸ್ಥಾನ ಆವರಣಲ್ಲಿ ಕೃಷಿ ಮೇಳ ಹಾಗೂ ನಾಡಕುಸ್ತಿ ಪಂದ್ಯಾವಳಿಗಳು ನಡೆದು ಜಾತ್ರೆಗೆ ಮೆರುಗು ನೀಡಿದವು.

ಸುಣ್ಣಬಣ್ಣಗಳಿಂದ ದೇವಸ್ಥಾನ ಶೃಂಗಾರ ಗೊಳಿಸಲಾಗಿತ್ತು. ದೇವರ ಮೂರ್ತಿಗೆ ಸೇವಂತಿಗೆ ಮತ್ತು ಇತರ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಎಣ್ಣೆ ಹಚ್ಚಿದ ಸಣ್ಣ ಸಣ್ಣ ಪಂಜಿಗೆ ಬೆಂಕಿ ಹಚ್ಚಿ ದೇವಸ್ಥಾನದ ಸುತ್ತ ಮೂರುಸುತ್ತ ಪ್ರದಕ್ಷಿಣೆ ಹಾಕಿ ಸಾಲು ಸಾಲಾಗಿ ನಿಂತು ದೇವರು ಗುಡಿ ಹೊಕ್ಕಿ ಪೂಜೆ ಸಲ್ಲಿಸಿದರು.

ಸಿಂಗಾರಗೊಳಿಸಿದ್ದ ದನಗಳನ್ನು ಕೂಡ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸಿದರು.
ನಂತರ ಮಹದೇಶ್ವರ ಸ್ವಾಮಿಯ ರಥ ಹಾಗೂ ಹುಲಿವಾಹನೋತ್ಸವ ಸಂಭ್ರಮದಿಂದ ಜರುಗಿದವು. ಜಾತ್ರೆಗೆ ಸೇರಿದ್ದ ಅಪಾರ ಭಕ್ತರ ಸಮೂಹ ರಥ ಮತ್ತು ಹುಲಿವಾಹನೋ ತ್ಸವಗಳಿಗೆ ಹೂ, ಹಣ್ಣು, ಜವನ ಎಸೆದು ಭಕ್ತಿಭಾವಗಳನ್ನು ಪ್ರದರ್ಶಿಸಿದರು.

ಜಾತ್ರೆಯಲ್ಲಿ ವಿಶೇಷವಾಗಿ ಕ್ಯಾತನಹಳ್ಳಿಯ ರಂಗ ಕೃಷಿ ಬಳಗದವರು ರೈತರಿಂದ ರೈತರಿಗಾಗಿ ರೈತರಿ ಗೋಸ್ಕರ ಕೃಷಿಮೇಳವನ್ನು ಆಯೋಜಿ ಸಿದ್ದರು. ರೂ. 1.80 ಲಕ್ಷ ಬೆಲೆಯುಳ್ಳ ಹಳ್ಳಿಕಾರ್ ತಳಿಯ ಎತ್ತುಗಳು, ಎಚ್‌ಎಫ್ ತಳಿಯ ಎಮ್ಮೆಗಳು, ಟರ್ಕಿ ಕೋಳಿಗಳು, ಬಂಡೂರ್ ತಳಿ, ಲವ್‌ಬರ್ಡ್ಸ್ ಕಾಕ್‌ಟೇಲ್ ಕೋಳಿಗಳು ಮೇಳದಲ್ಲಿ ಗಮನ ಸೆಳೆದವು. ತೋಟಗಾರಿಕೆ, ಪಶುಪಾಲನಾ, ರೇಷ್ಮೆ, ಕೃಷಿ ಇಲಾಖೆ, ಜಲಾನಯನ ಇಲಾಖೆಯ ಅಂತರ್ಜಲ ಹೆಚ್ಚಿಸಿ-ನೀರು ಉಳಿಸಿ, ಮಣ್ಣು ಸಂರಕ್ಷಿಸಿ ವಸ್ತ ಪ್ರದರ್ಶನ ರೈತರಿಗೆ ಮಾಹಿತಿ ನೀಡಿದವು.

ಜಾತ್ರೆ ಅಂಗವಾಗಿ 25 ಜತೆ ನಾಡಕುಸ್ತಿ ಪಂದ್ಯಾವಳಿಗಳು ರಾಜ್ಯ ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದವು.ಕ್ಯಾತಹಳ್ಳಿಯ ಪೈ. ಪಂಚಾಕ್ಷರಿ ಮತ್ತು ಶಿವಮೊಗ್ಗದ ಕೂಡ್ಲಿ, ಪೈ. ಶಿವು ಅವರ ನಡುವೆ ನಡೆದ ಕುಸ್ತಿಯಲ್ಲಿ ಸಮಬಲ ಪ್ರದರ್ಶಿಸಿ ಪ್ಷೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಬಾಲಕಿಯರ ಕುಸ್ತಿಯಲ್ಲಿ ಕ್ಯಾತನಹಳ್ಳಿಯ ಪೈ.ಸುರಭಿ ಮತ್ತು ಮಂಗಳೂರು ಪೈ.ಪದ್ಮ ಹಾಗೂ ಶ್ವೇತ ಮತ್ತು ವೇದ ಅವರ ನಡುವೆ ಕುಸ್ತಿ ನಡೆದು ಚಪ್ಪಾಳೆ ಗಿಟ್ಟಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ.ಗೌಡೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷೆ ಮೀರಾಶಿವಲಿಂಗಯ್ಯ ತಾಲ್ಲೂಕು ಅಧ್ಯಕ್ಷಎಚ್.ಆರ್.ಧನ್ಯಕುಮಾರ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.