ADVERTISEMENT

ಮುಂದುವರಿದ ಮಳೆ, ಅಲ್ಲಲ್ಲಿ ಹಾನಿ

​ಪ್ರಜಾವಾಣಿ ವಾರ್ತೆ
Published 28 ಮೇ 2018, 9:50 IST
Last Updated 28 ಮೇ 2018, 9:50 IST

ಮಂಡ್ಯ: ನಗರದಲ್ಲಿ ಶನಿವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಸಂಜೆ 5.30ಕ್ಕೆ ಆರಂಭವಾದ ಮಳೆ 6 ಗಂಟೆಯವರೆಗೆ ಗುಡುಗು, ಮಿಂಚು ಸಮೇತ ಸುರಿಯಿತು. 6 ಗಂಟೆಯ ನಂತರವೂ ಕೆಲಕಾಲ ಜಿಟಿಜಿಟಿಯಾಗಿ ಸುರಿಯುತ್ತಲೇ ಇತ್ತು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿ ರಸ್ತೆ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆಗಳು ಜಲಾವೃತಗೊಂಡಿದ್ದವು. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಗುಂಡಿಗಳು ಕಾಣದೆ ವಾಹನ ಸವಾರರು ಪರದಾಡಿದರು. ಸಂಜೆ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿ ಸಿಕ್ಕಕೊಂಡಿದ್ದರು.

ಮಾವು ಮೇಳಕ್ಕೆ ಮಳೆ ಅಡ್ಡಿ: ತೋಟಗಾರಿಕೆ ಇಲಾಖೆ ವತಿಯಿಂದ ಕಾವೇರಿ ಉದ್ಯಾನದ ಬಳಿ ನಡೆಯುತ್ತಿರುವ ಮಾವು ಮೇಳಕ್ಕೆ ಮಳೆ ಅಡ್ಡಿಯಾಯಿತು. ಸಂಜೆ ಮಳೆ ಸುರಿದ ಕಾರಣ ಜನರು ಮಾವು ಮಳಿಗೆಯ ಕಡೆ ತಲೆ ಹಾಕಲಿಲ್ಲ. ಹೀಗಾಗಿ ಮಳಿಗೆ ಹಾಕಿದ್ದ ರೈತರು ನಿರಾಸೆ ಅನುಭವಿಸಿದರು.

ADVERTISEMENT

ತಡಗವಾಡಿ: ಮನೆ ಕುಸಿತ

ಶ್ರೀರಂಗಪಟ್ಟಣ: ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಮಳೆಯಿಂದಾಗಿ ಶಕ್ರವಾರ ಮನೆಯೊಂದು ಭಾಗಶಃ ಕುಸಿದಿದೆ. ಗ್ರಾಮದ ದೊಡ್ಡದೇವೇಗೌಡ ಅವರ ಮಗ ಲಿಂಗರಾಜು ಎಂಬವರ ಮನೆ ಅರ್ಧದಷ್ಟು ಕುಸಿದು ಬಿದ್ದಿದೆ. ತೊಲೆಗಳು, ರಿಪೀಸು ಪಟ್ಟಿಗಳು ಮುರಿದಿವೆ. ನೂರಾರು ಹೆಂಚುಗಳು ನಾಶವಾಗಿವೆ. ಪಾತ್ರೆ, ಪಡಗ, ದವಸ– ಧಾನ್ಯ ನಾಶವಾಗಿವೆ. ಮನೆ ಕುಸಿದಾಗ ಒಳಗಿದ್ದ ಲಿಂಗರಾಜು ಅವರ ಪತ್ನಿ ತಕ್ಷಣ ಹೊರಕ್ಕೆ ಓಡಿ ಬಂದು ಅಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೂಕ್ತ ಪರಿಹಾರ ಕೋರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಲಿಂಗರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.