ADVERTISEMENT

`ಮುಡಾ'ದಲ್ಲಿ ಈಗ ನೀರವ ಮೌನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 5:50 IST
Last Updated 20 ಜುಲೈ 2013, 5:50 IST

ಮಂಡ್ಯ: ಹಣಕಾಸು ವಂಚನೆಯ ಸುಳಿಗೆ ಸಿಲುಕಿರುವ ಮಂಡ್ಯ ನಗರಾಭಿವೃದ್ಧಿ ಕಚೇರಿಯಲ್ಲಿ ಈಗ ನೀರವ ಮೌನ ಆವರಿಸಿದೆ. ಯಾವುದೇ ಅಧಿಕಾರಿಗಳು ತುಟಿ ಬಿಚ್ಚಲು ಸಿದ್ಧರಿಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಬೇರೆ ಪಕ್ಷವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಪರಿಣಾಮ ಅಧ್ಯಕ್ಷರ ಸ್ಥಾನ ಖಾಲಿ ಇದೆ. ನಿರ್ದೇಶಕರುಗಳೂ ಇಲ್ಲ.
ಮುಡಾ ತೆಗೆದುಕೊಂಡಿರುವ ಕಾಮಗಾರಿ ಹಾಗೂ ದಿನ ನಿತ್ಯದ ಕಾರ್ಯಗಳನ್ನು ಮುಡಾ ಆಯುಕ್ತರೇ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಹಣಕಾಸು ವಂಚನೆ ಮಾಡಿದ ಆರೋಪದ ಮೇಲೆ ಮುಡಾ ಆಯುಕ್ತರ ಬಂಧನವಾದ ಮೇಲೆ ಅವರೂ ಇಲ್ಲದಂತಾಗಿದೆ.

ಮಂಡ್ಯ ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ ಅವರು ಮುಡಾ ಆಯುಕ್ತರಾಗಿ ಪ್ರಭಾರ ವಹಿಸಿಕೊಂಡಿದ್ದಾರೆ ಆದರೂ, ಅವರಿಗೆ ಎಸಿ ಯಾಗಿ ಬಹಳಷ್ಟು ಕಾರ್ಯಗಳಿರುವುದರಿಂದ ಅತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಅವ್ಯವಹಾರವಾಗಿರುವುದರಿಂದ ಪ್ರಮುಖ ನಿರ್ಧಾರಗಳನ್ನೂ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಶುಕ್ರವಾರವಷ್ಟೇ ಮುಡಾ ಲೆಕ್ಕಾಧಿಕಾರಿ ನಾಗರಾಜು ಅವರ ಬಂಧನವಾಗಿದೆ. ಜತೆಗೆ ಮುಡಾದ ವಿವಿಧ ಅಧಿಕಾರಿಗಳನ್ನೂ ಪೊಲೀಸರು ವಿಚಾರಣೆಗೆ ಒಳ ಪಡಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಆತಂಕದಲ್ಲಿ ದಿನಗಳನ್ನು ದೂಡುವಂತಾಗಿದೆ.

ಹೊಸ ಬಡಾವಣೆಗಳ ರಚನೆಗೆ ಅನುಮತಿ ಪಡೆಯಲು ಆಗಮಿಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳು  ಹಾಗೂ ಕಾಮಗಾರಿಗಳನ್ನು ತೆಗೆದುಕೊಳ್ಳುವುದಕ್ಕಾಗಿ ಆಗಮಿಸುತ್ತಿದ್ದ ಗುತ್ತಿಗೆದಾರರೂ ಈಗ ಹೆಚ್ಚಿಗೆ ಮುಡಾ ಕಚೇರಿಯತ್ತ ಕಾಲಿಡುತ್ತಿಲ್ಲ.

ಮುಡಾದಿಂದ ಕೈಗೊಂಡಿರುವ ಹಾಗೂ ಕೈಗೊಳ್ಳಲಿರುವ ಕಾಮಗಾರಿಗಳ ಬಗೆಗೂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಲು ಸಾಧ್ಯವಾಗುತ್ತಿಲ್ಲ. ಹಗರಣದ ಸುಳಿ ಯಾವಾಗ, ಯಾರತ್ತ ತಿರುಗುವುದೋ ಎನ್ನುವ ಆತಂಕ ಮುಡಾ ಹಾಗೂ ಆರೋಪಿಗಳೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದ್ದವರನ್ನು ಕಾಡುತ್ತಿದೆ.

ಮುಡಾ ಕಚೇರಿ ಎಂದಿನಂತೆ ಬಾಗಿಲು ತೆರೆಯುತ್ತದೆ. ಅಧಿಕಾರಿಗಳು ಹಾಜರಾಗಿ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಆದರೆ, ಎಂದಿನಂತಿರುತ್ತಿದ್ದ ಲವಲವಿಕೆ ಮಾತ್ರ ಕಂಡು ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.