ADVERTISEMENT

ಮುಡಾ ಹಣ ಮಾಯ: ಚರ್ಚೆಗೆ ಗ್ರಾಸ

ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 11:12 IST
Last Updated 7 ಜುಲೈ 2013, 11:12 IST

ಮಂಡ್ಯ:  ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ `ಠೇವಣಿ' ಹಣ 5 ಕೋಟಿ ರೂಪಾಯಿ ಮಾಯವಾದ ಕುರಿತು ಹಲವಾರು ಪ್ರಶ್ನೆಗಳು ಎದ್ದಿವೆ. ಚರ್ಚೆಗೂ ಗ್ರಾಸವಾಗಿದೆ.

ಮುಡಾ ಆಯುಕ್ತರು ಚೆಕ್ ನೀಡುವಾಗ ಎಡವಿದರೆ, ನೀಡಿದ ಚೆಕ್ ಅನ್ನು ಬ್ಯಾಂಕ್ ಅಧಿಕಾರಿಗಳು ಜಾಣ್ಮೆಯಿಂದ ಬೇರೆ ಖಾತೆಗೆ ವರ್ಗಾಯಿಸಿದರೇ, ಚೆಕ್ ಮೂಲಕ ನೀಡಿದ ಹಣವನ್ನು ಲಪಟಾಯಿಸಿದರೆ ಮುಂದೆ ಸಿಕ್ಕಿ ಬೀಳುತ್ತೇವೆ ಎಂಬ ಅರಿವು ಇರಲಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.

ಆಯುಕ್ತರು ಚೆಕ್‌ನಲ್ಲಿ ಹೆಸರನ್ನು ನಮೂದಿಸಿದ ನಂತರ ಗೆರೆ ಎಳೆದಿದ್ದರೆ, ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುವ ವಾದವೂ ಕೇಳಿ ಬರುತ್ತಿದೆ.

ಠೇವಣಿ ಹಣದ ಅವಧಿಯು ಮೇ ತಿಂಗಳಿನಲ್ಲಿಯೇ ಪೂರ್ಣಗೊಂಡಿದೆ. ಆಗ ಆಯುಕ್ತರು ಹಣ ಪಡೆಯಲು ಏಕೆ ಮುಂದಾಗಲಿಲ್ಲ. ಪಡೆಯದಿದ್ದರೂ ಏಕೆ ನವೀಕರಿಸಲಿಲ್ಲ ಎಂಬುದು ಖಾತೆದಾರರ ಖಾತೆಗೆ ಅಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ವರ್ಗಾವಣೆ ಮಾಡುವಾಗ ಚೆಕ್ ನೀಡಿದ ಮುಡಾದವರನ್ನು ಏಕೆ ಸಂಪರ್ಕಿಸಲಿಲ್ಲ ಎಂಬುದು ನಿಗೂಢವಾಗಿದೆ.
ಖಾತೆಗೆ ವರ್ಗವಾದ ನಂತರ ಹಣವು, ಅಲ್ಲಿಂದ ಎಲ್ಲಿಗೆ ವರ್ಗವಾಗಿದೆ. ಈ ಪ್ರಕರಣದ ಹಿಂದೆ ರಾಜಕೀಯ ಮುಖಂಡರ ಕೈವಾಡವಿದೆಯೇ ಎಂಬುದು ಚರ್ಚೆಯಾಗುತ್ತಿದೆ.

ಆರ್‌ಬಿಐನಿಂದಲೂ ತನಿಖೆ: ಒಬ್ಬರ ಖಾತೆಯಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆದರೆ, ಅದು ಆರ್‌ಬಿಐ ಗಮನಕ್ಕೆ ಬರುತ್ತದೆ. ಅವರ ಖಾತೆಗೆ ಹಣ ಜಮಾ ಆಗಿದ್ದಲ್ಲದೇ, ಅವರ ಖಾತೆಯಿಂದಲೂ ಹಣವನ್ನು ಬೇರೆಯವರಿಗೆ ಚೆಕ್ ಮೂಲಕ ನೀಡಿದ್ದರ ಬಗ್ಗೆಯೂ ಆರ್‌ಬಿಐ ಅಧಿಕಾರಿಗಳು ಈಗಾಗಲೇ ಮಾಹಿತಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಯಾವ ಕಾಮಗಾರಿ ಮಾಡಿದ್ದರಿಂದ ಹಣ ನೀಡಲಾಗಿದೆ. ಅದಕ್ಕೆ ಆದಾಯ ತೆರಿಗೆಯನ್ನು ಸಲ್ಲಿಸಲಾಗಿದೆಯೇ ಇತ್ಯಾದಿ ವಿವರಗಳ ಬಗೆಗೂ ತನಿಖೆ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪ್ರತಿಭಟನೆ: ಮುಡಾ ಠೇವಣಿಯಾಗಿಟ್ಟ ಹಣ ಇನ್ನೊಬ್ಬರ ಖಾತೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಹಿಂದೂಸ್ತಾನ ನಿರ್ಮಾಣ ದಳ ಹಾಗೂ ಭ್ರಷ್ಟಾಚಾರ ವಿರೋಧಿ ರಂಗದ ಸದಸ್ಯರು ಶನಿವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಹಣ ಕಾಣೆಯಾಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು. ಸಿ.ಟಿ. ಮಂಜುನಾಥ್, ಜಿತೇಂದ್ರ, ಸಿದ್ದರಾಜು ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.