ADVERTISEMENT

ಮೂಲಸೌಕರ್ಯವೇ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 7:45 IST
Last Updated 10 ಅಕ್ಟೋಬರ್ 2012, 7:45 IST

ಪಾಂಡವಪುರ:  ಕುಡಿಯುವ ನೀರು, ರಸ್ತೆ, ಚರಂಡಿ, ಬಸ್ ಸೌಲಭ್ಯ, ಆರೋಗ್ಯ ಸೇರಿದಂತೆ ಮೂಲಸೌಕರ್ಯದಿಂದ ವಂಚಿತವಾಗಿರುವ ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮವು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕನಗನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, 900 ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ, ಒಂದು ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಕಿರು ನೀರು ಸರಬರಾಜಿನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಆದರೆ ಆ ನೀರು ಸಾಲದಾಗಿದೆ. ವಿದ್ಯುತ್ ಸರಬರಾಜಿನ ತೊಂದರೆಯಿಂದಾಗಿ ಮೂರು ದಿನಗಳಿಗೊಮ್ಮೆ ನೀರು ಒದಗಿಸಲಾಗುತ್ತಿದೆ. ಕುಡಿಯುವುದಕ್ಕೆ, ಬಟ್ಟೆ ತೊಳೆಯಲು, ಜಾನುವಾರುಗಳಿಗೆ ಇತ್ಯಾದಿ ಬಳಕೆಗೆ ಸಾಕಾಗುವುದಿಲ್ಲ ಎನ್ನುತ್ತಾರೆ ಗ್ರಾಮದ ಮಹಿಳೆಯರು. 

 5 ವರ್ಷದ ಹಿಂದೆ ನೀರಿನ ಓವರ್ ಹೆಡ್‌ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಇಲ್ಲಿಯವರೆಗೂ ಒಂದು ತೊಟ್ಟು ನೀರು ತುಂಬಿಲ್ಲ. ಕೊಳವೆ ಬಾವಿಯೊಂದನ್ನು ಕೊರೆಯಿಸಲಾಗಿತ್ತು. ಅದಕ್ಕೆ ನೀರು ಬರಲಿಲ್ಲ ಎಂದು ಹಾಗೆಯೇ ಬಿಡಲಾಗಿದೆ.

ಈ ಊರಿನ ಸಂಪರ್ಕ ರಸ್ತೆಗಳು ದಿಣ್ಣೆ, ಧೂಳು, ಗುಂಡಿಗಳಿಂದ ಕೂಡಿದ್ದು ಡಾಂಬರೀಕರಣದ ಭಾಗ್ಯ ಕಂಡಿಲ್ಲ. ವಾಹನಗಳ ಸಂಚಾರ ಕಷ್ಟವಾಗಿದೆ. ಬಸ್ ಸಂಚಾರ ಇಲ್ಲದ್ದರಿಂದ 2 ಕಿ.ಮೀ. ದೂರದ ಸುಂಕಾ ತೊಣ್ಣೂರು ಗ್ರಾಮಕ್ಕೆ ನಡೆದು ಬಂದು ಬಸ್ ಹಿಡಿಯಬೇಕು.

ಗ್ರಾಮದಲ್ಲಿ ಚರಂಡಿಯ ಸುಳಿವೇ ಇಲ್ಲ. ಇದರಿಂದಾಗಿ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತಿದೆ. ಶೌಚಾಲಯದ ಕೊರತೆಯೂ ಇದೆ. ಆರೋಗ್ಯ ಸೌಲಭ್ಯಕ್ಕಾಗಿ 15 ಕಿ.ಮೀ.ದೂರದ ಪಾಂಡವಪುರ ಆಸ್ಪತ್ರೆಗೆ ಬರಬೇಕಾಗಿದೆ.
ಮಾಡ್ರಹಳ್ಳಿ ಕೆರೆಯ ಕಿರು ನಾಲೆಯಿಂದ ಈ ಗ್ರಾಮದ ಕೃಷಿ ಭೂಮಿಗೆ ನೀರು ಸರಬರಾಜಾಗುತ್ತದೆ. ಆದರೆ, ಕೆರೆ ಹಾಗೂ ಕಿರು ನಾಲೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ಪರಿಣಾಮ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ರಾಮಕೃಷ್ಣ,
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.