ADVERTISEMENT

ಮೊಬೈಲ್‌ಗಳಿಗೆ ಕರೆ ಮಾಡಿ ಮತಯಾಚನೆ

ಸಾಮಾಜಿಕ ಜಾಲತಾಣಗಳಲ್ಲೂ ಸಂದೇಶ, ಕರೆ ಸ್ವೀಕರಿಸದಿದ್ದರೆ ಎಸ್‌ಎಂಎಸ್‌ ಸಂದೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:32 IST
Last Updated 12 ಮೇ 2018, 7:32 IST

ಮಂಡ್ಯ: ಶುಕ್ರವಾರ ಇಡೀ ದಿನ ಅಂತಿಮ ಹಂತದ ಕಸರತ್ತು ನಡೆಸಿದ ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಮಾರ್ಗಗಳ ಮೂಲಕ ಮತದಾರರನ್ನು ತಲುಪಲು ಯತ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸುವ ಜೊತೆಗೆ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಿ ಮತಯಾಚನೆ ಮಾಡಿದರು.

ಮತದಾರರ ಯಾದಿಯಂತೆ ಪ್ರತಿ ವಾರ್ಡ್‌ ಮಟ್ಟದಲ್ಲಿ ಮತದಾರರ ಮೊಬೈಲ್‌ ಸಂಖ್ಯೆಗಳನ್ನು ಮೊದಲೇ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಕಾರ್ಯಕರ್ತರು ಪ್ರತಿಯೊಬ್ಬರಿಗೂ ಕರೆ ಮಾಡುವ ಮೂಲಕ ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಫೋನ್‌ ಕರೆಯ ಮೂಲಕ ಅಂತಿಮವಾಗಿ ಮತದಾರರ ಮನಮುಟ್ಟಲು ಯತ್ನಿಸಿದರು. ನೀತಿ ಸಂಹಿತೆಯ ನಡುವೆಯೂ ಫೇಸ್‌ಬುಕ್‌ ಇನ್‌ಬಾಕ್ಸ್‌ ಮೂಲಕ ಮತಯಾಚನೆ ಮಾಡುವ ಅಂಶಗಳು ಬೆಳಕಿಗೆ ಬಂದಿವೆ. ಜೊತೆ ವಾಟ್ಸ್‌ಆ್ಯಪ್‌ ಮೂಲಕವು ಮತದಾರರಿಗೆ ಸಂದೇಶ ರವಾನಿಸಲು ಯತ್ನಿಸಿದರು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ವಹಿಸಿಕೊಂಡಿರುವ ಮುಖಂಡರು ಯುವಕರೊಡಗೂಡಿ ಕರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ಸಂಪರ್ಕಿಸಿದರು.

‘ವಾರ್ಡ್‌ವಾರು ಮತದಾರರ ಮೊಬೈಲ್‌ ಸಂಖ್ಯೆ ಸಂಗ್ರಹಿಸಿ ಕರೆ ಮಾಡಿ ನಮ್ಮ ಕಾರ್ಯಕರ್ತರು ಮತದಾರರ ಬೆಂಬಲ ಕೋರಿದ್ದಾರೆ. ಕೆಲವು ಮೊಬೈಲ್ ನಂಬರ್‌ಗಳು ಸ್ಥಗಿತಗೊಂಡಿದ್ದವು. ಅವರಿಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಿದ್ದೇವೆ. ಇಡೀ ದಿನ ಒಂದು ತಂಡ ಇದೇ ಕೆಲಸ ಮಾಡಿದೆ’ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಚಿದಂಬರ್‌ ತಿಳಿಸಿದರು.

ADVERTISEMENT

ಮನೆಮನೆಗೆ ಪ್ರಚಾರ : ಎಲ್ಲ ಪಕ್ಷಗಳ ಅಭ್ಯರ್ಥಿಗಳು ಬೆಳಿಗ್ಗೆಯಿಂದಲೂ ಮನೆಮನೆಗೆ ತೆರಳಿ ಪ್ರಚಾರ ನಡೆಸಿದರು. ಹಳ್ಳಿಗಳಿಗೆ ತೆರಳಿ ಒಂದು ಬೀದಿಯ ಪ್ರಮುಖರ ಮನೆಯಲ್ಲಿ ಮತದಾರರನ್ನು ಸೇರಿಸಿ, ಸಭೆ ನಡೆಸಿ ಮತ ಹಾಕುವಂತೆ ಮನವಿ ಮಾಡಿದರು. ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ಪಿ. ರವಿಕುಮಾರ್‌ಗೌಡ ಅವರ ಪತ್ನಿ ಸೌಂದರ್ಯಾ ಕಲ್ಲಹಳ್ಳಿ ಭಾಗದ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು. ಇದರ ಜೊತೆಗೆ ಎಲ್ಲ ಅಭ್ಯರ್ಥಿಗಳ ಕುಟುಂಬ ಸದಸ್ಯರು ತಂಡೋಪತಂಡವಾಗಿ ಮತದಾರರನ್ನು ಸೆಳೆಯಲು ಯತ್ನಿಸಿದರು.

ಜೆಡಿಎಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ವೈದ್ಯರ ವಸತಿ ಗೃಹಕ್ಕೆ ತೆರಳಿ ಮತಯಾಚನೆ ಮಾಡಿದರು. ನಂತರ ಸ್ಯಾಂಜೋ ಆಸ್ಪತ್ರೆ, ಚರ್ಚ್‌ ಸ್ಟ್ರೀಟ್‌ ವಿವಿಧೆಡೆ ತೆರಳಿ ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ, ಮನೆಗಳಲ್ಲಿ ಸಭೆ ಮಾಡಿ ಮತಯಾಚನೆ ಮಾಡಿದರು. ಪಕ್ಷೇತರ ಅಭ್ಯರ್ಥಿ, ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಅವರು ಬೆಳಿಗ್ಗೆ ಯಿಂದಲೂ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಎಂ.ಬಿ.ನಾಗಣ್ಣಗೌಡ ಅವರು ಶ್ರಮಿಕರು ವಾಸಿಸುವ ಬಡಾವಣೆಗಳಿಗೆ ಭೇಟಿ ನೀಡಿ ಮತದಾರ ಮನಮುಟ್ಟಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.