ADVERTISEMENT

ರಂಗಭೂಮಿ ವಿಶಿಷ್ಟ ಮಾಧ್ಯಮ: ನಾಗರಾಜಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 5:12 IST
Last Updated 21 ಸೆಪ್ಟೆಂಬರ್ 2013, 5:12 IST

ಮಂಡ್ಯ: ‘ರಂಗಭೂಮಿ ಎನ್ನುವುದು ಮನುಷ್ಯನನ್ನು ಮನುಷ್ಯನನ್ನಾಗಿಯೇ ರೂಪಿಸುವ ವಿಶಿಷ್ಟ ಮಾಧ್ಯಮ’ ಎಂದು ಕಿರುತೆರೆ ಕಲಾವಿದ ಕೆವಿ. ನಾಗರಾಜಮೂರ್ತಿ ವ್ಯಾಖ್ಯಾನಿಸಿದರು.

ಕರ್ನಾಟಕ ಸಂಘ ಹಾಗೂ ಜನ ದನಿ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ನಾಟಕೋತ್ಸವದ ಸಮಾರೋಪದಲ್ಲಿ ಶುಕ್ರವಾರ ಅವರು ಮಾತನಾಡಿದರು.

ರಂಗಭೂಮಿಯ ಅನನ್ಯತೆಯನ್ನು ಕವಿಗಳ ಮಾತಿನಲ್ಲೇ ಹೇಳುವುದಾದರೆ ದೃಶ್ಯಗಳ ಮೂಲಕ ಕಾವ್ಯ ಬರೆಯುವ ಶ್ರೇಷ್ಠ ಮಾಧ್ಯಮ ಎಂದು ಬಣ್ಣಿಸಿದರು, ತೆರೆದ ಮನಸ್ಸಿನಿಂದ ನಾಟಕಗಳನ್ನು ಆಸ್ವಾದಿಸಿದರೇ, ನಮ್ಮ ವ್ಯಕ್ತಿತ್ವವೂ ಉತ್ತಮವಾಗಿರಲಿದೆ ಎಂದು ಹೇಳಿದರು.

ಪ್ರೊ. ಜಯಪ್ರಕಾಶ್‌ಗೌಡ ಮತ್ತು ಅವರ ಸಮಾನ ಮನಸ್ಕರು ನಾಟಕೋತ್ಸವವನ್ನು ಆಯೋಜಿಸುವ ಮೂಲಕ ಅರಿವಿನ ಬೆಳಕನ್ನು ಪಸರಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ಜನಪರ ಹಾಗೂ ಜನಪಥವಾದ ನಾಟಕಗಳನ್ನು ಕೊಟ್ಟ ಕೀರ್ತಿ ಮಂಡ್ಯ ಜಿಲ್ಲೆಯ ನೆಲದ ಜನರಿಗೆ ಸೇರುತ್ತದೆ. ಶ್ರೀಕಂಠೇಶಗೌಡ, ಕೆ.ವಿ.ಶಂಕರಗೌಡ ಅವರಂತಹ ಅನೇಕರ ಕೊಡುಗೆ ದೊಡ್ಡದಿದೆ ಎಂದು ಸ್ಮರಿಸಿದರು.

ಮಂಡ್ಯ ಜಿಲ್ಲೆ ಎಂದರೆ ರಾಜಕಾರಣ, ಭಾಷೆಯ ಸೊಗಡು, ಕಬ್ಬಿನ ಸಿಹಿ ನೆನಪಿಗೆ ಬರುತ್ತದೆ. ನಾಟಕ ನೋಡಲು ಬಂದಿರುವ ರಂಗಾಸಕ್ತರನ್ನು ಗಮನಿಸಿದರೆ, ಇಲ್ಲಿನ ಮಣ್ಣಿನಲ್ಲಿ ಸಾಂಸ್ಕೃತಿಕ ಪ್ರಜ್ಞೆಯ ಬೇರುಗಳೂ ಸಹ ಅಷ್ಟೇ ಆಳವಾಗಿ ಬೇರೂರಿವೆ ಎನ್ನುವುದು ಗೊತ್ತಾಗುತ್ತದೆ ಎಂದರು.

ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಾಟಕ ಮಾಡಿದರೆ ಬೆರಳೆಣಿಕೆ ಸಂಖ್ಯೆಯ ಜನರು ಬರುತ್ತಾರೆ. ಅಲ್ಲಿ ನೂರು ಜನ ಸೇರಿದರೆ, ನಾಟಕ ಯಶಸ್ವಿ ಆಯಿತು ಎನ್ನುತ್ತೇವೆ. ಇಲ್ಲಿ ಸೇರಿರುವ ಜನರನ್ನು ನೋಡಿದರೆ ಹೆಮ್ಮೆ ಆಗುತ್ತದೆ ಎಂದು ಹೇಳಿದರು.

ಕೋಣನಹಳ್ಳಿ ಜಯರಾಮು, ಶ್ರೀಧರ್‌, ಶಿವಲಿಂಗೇಗೌಡ, ರವಿ, ಸವಿತಾ ಬಿ, ಪುನೀತ್‌ಗೌಡ ಮೆಣಸಗೆರೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಡ್ಯಾಪೋಡಿಲ್ಸ್‌ ಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣ, ಜೆಡಿಎಸ್‌ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಮಂಜುಳಾ ಉದಯಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.