ADVERTISEMENT

ರವೀಂದ್ರಗೆ ತಪ್ಪಿದ ಟಿಕೆಟ್: ಅಂಬರೀಶ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:37 IST
Last Updated 17 ಏಪ್ರಿಲ್ 2013, 10:37 IST

ಶ್ರೀರಂಗಪಟ್ಟಣ: ಕೆಪಿಸಿಸಿ ಸದಸ್ಯ ರವೀಂದ್ರಶ್ರೀಕಂಠಯ್ಯ ಅವರಿಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಪ್ರಕಟಿಸಿ ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು ಅವರಿಗೆ ನೀಡಿದ್ದರಿಂದ ಆಕ್ರೋಶಗೊಂಡ ರವೀಂದ್ರ ಬೆಂಬಲಿಗರು ಮಂಗಳವಾರ ಪಟ್ಟಣದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಅಂಬರೀಶ್ ವಿರುದ್ಧ ಪ್ರತಿಭಟನೆ ನಡೆಸಿದರು.

ಕುವೆಂಪು ವೃತ್ತದ ಬಳಿ ಜಮಾಯಿಸಿದ ರವೀಂದ್ರ ಬೆಂಬಲಿಗರು ಅಂಬರೀಶ್ ಹೆಸರಿನ ಫಲಕಕ್ಕೆ ಪಾದರಕ್ಷೆ ತೂಗು ಹಾಕಿ ಪ್ರತಿಭಟನೆ ನಡೆಸಿದರು.
ಅಂಬರೀಶ್ ಹೆಸರಿನ ಫಲಕಗಳನ್ನು ಕಾಲಿನಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿದರು. ಎರಡು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು.
ಬೆಂಗಳೂರು-ಮೈಸೂರು ಹೆದ್ದಾರಿಗೆ ನುಗ್ಗಿ ವಾಹನ ತಡೆದು ಪ್ರತಿಭಟನೆ ನಡೆಸುವ ರವೀಂದ್ರ ಬೆಂಬಲಿಗರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

`ರವೀಂದ್ರ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಟಿಕೆಟ್ ಕಸಿದುಕೊಂಡ ಅಂಬರೀಶ್ ಈ ಬಾರಿಯೂ ದ್ರೋಹ ಮಾಡಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ಪಾಠ ಕಲಿಸಲಿದ್ದಾರೆ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಮರೀಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ, ಅರಕೆರೆ ಗುರು ಇತರರು ಅಸಹನೆ ವ್ಯಕ್ತಪಡಿಸಿದರು.

ನೇರಲಕೆರೆ: ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ ರವೀಂದ್ರ ಬೆಂಬಲಿಗರು ಮಂಗಳವಾರ ಅಂಬರೀಶ್ ವಿರುದ್ಧ ಪ್ರತಿಭಟನೆ ನಡೆಸಿದರು.
ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಂಜುಂಡೇಗೌಡ, ಕೃಷ್ಣೇಗೌಡ, ಉಮೇಶ್, ಅಶ್ವತ್ಥ, ಮಲ್ಲೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರವೀಂದ್ರ ನಾಮಪತ್ರ ಇಂದು: ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬೆಂಬಲಿಗರು ಹೇಳಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಚಂದಗಿರಿಕೊಪ್ಪಲು ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.