ADVERTISEMENT

ರಾಜ್ಯಪಾಲರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಲಿ

ಕುದುರೆ ವ್ಯಾಪಾರ: ಪ್ರಗತಿಪರ ಸಂಘಟನೆಗಳ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:13 IST
Last Updated 19 ಮೇ 2018, 9:13 IST

ಮಂಡ್ಯ: ರಾಜ್ಯಪಾಲರ ಅಸಾಂವಿಧಾನಿಕ ನಡೆ ಹಾಗೂ ಕೇಂದ್ರ ಸರ್ಕಾರದ ಅಧಿಕಾರ ದುರುಪಯೋಗವನ್ನು ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಶುಕ್ರವಾರ ಸಿಪಿಎಂ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ರಾಜ್ಯದಲ್ಲಿ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 36ರಷ್ಟು ಮತವನ್ನು ಪಡೆದುಕೊಂಡಿದೆ. ಆದರೂ ರಾಜ್ಯಪಾಲರಾದ ವಾಜುಭಾಯಿ ವಾಲಾ ಅವರು ಬಿಜೆಪಿ ಮುಖಂಡ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಟ್ಟು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಇದರಿಂದಾಗ ರಾಜ್ಯಪಾಲರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಏಜೆಂಟರಾಗಿ ಶಾಸಕರ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಯಾವುದೇ ಶಾಸಕರು ಹಣದ ಹಾಗೂ ಅಧಿಕಾರದ ಆಮಿಷಕ್ಕೆ ಒಳಗಾಗಬಾರದು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಬಿಡಬಾರದು. ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಜನಪ್ರತಿನಿಧಿಯಾದ ನಿಮಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಬಹುಮತ ಪಡಯದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಕಾರ ನೀಡುತ್ತಿರುವ ಕೇಂದ್ರ ಸರ್ಕಾರ ಕೂಡ ತನ್ನ ಅಧಿಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಮುಖಂಡರು ನಾಲ್ಕು ತಂಡಗಳನ್ನು ರಚಿಸಿಕೊಂಡು ಸೂಟ್‌ಕೇಸ್ ಹಿಡಿದುಕೊಂಡು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ಕೊಟ್ಟು ಶಾಸಕರನ್ನು ಖರೀದಿ ಮಾಡುವ ‘ಆಪರೇಷನ್ ಕಮಲ’ ಕೈಕೊಟ್ಟಿದೆ. ಬಿಜೆಪಿಯ ಚಾಣಕ್ಯ ಎಂದು ಹೇಳಿಕೊಳ್ಳುವ ಅಮಿತ್‌ ಶಾ ಅವರ ತಂತ್ರಗಳು ರಾಜ್ಯದಲ್ಲಿ ವಿಫಲವಾಗಿವೆ ಎಂದು ವ್ಯಂಗ್ಯವಾಡಿದರು.

ADVERTISEMENT

ಪ್ರಗತಿಪರ ಸಂಘಟನೆಗಳ ಮುಖಂಡರಾದ ಪ್ರೊ.ಹುಲ್ಕೆರೆ ಮಹಾದೇವು, ಎಂ.ಬಿ.ನಾಗಣ್ಣಗೌಡ, ಕುಮಾರ್, ಚಂದ್ರಶೇಖರ್, ನಾರಾಯಣ, ಸುರೇಂದ್ರ, ಗಾಯತ್ರಿ, ಪುಟ್ಟಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.