ADVERTISEMENT

ರೈತರಿಂದ ಸೆಸ್ಕ್ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:58 IST
Last Updated 15 ಡಿಸೆಂಬರ್ 2012, 9:58 IST

ಪಾಂಡವಪುರ: ಬೆಳೆಗಳಿಗೆ ನೀರು ಹರಿಸಲು ಪಂಪ್‌ಸೆಟ್‌ಗಳಿಗೆ ನಿರಂತರ 6 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ನಲ್ಲಹಳ್ಳಿ, ಈರೇಗೌಡನಕೊಪ್ಪಲು, ಬಿಲ್ಲೇನಹಳ್ಳಿ, ಕೊಂತೇಗೌಡನಕೊಪ್ಪಲು ಗ್ರಾಮದ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸೆಸ್ಕ್ ಕಚೇರಿಗೆ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತರು `ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ಸೆಸ್ಕ್ ಅಧಿಕಾರಿಗಳಿಗೆ ಧಿಕ್ಕಾರ', `ವಿದ್ಯುತ್ ಕೊರತೆಯಿಂದಾಗಿ ನಮಗೆ ಕುಡಿಯಲು ಹಾಗು ಬೇಸಾಯ ಮಾಡಲು ನೀರು ಸಿಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ತಕ್ಷಣ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಸೆಸ್ಕ್ ಕಚೇರಿಗೆ ಬೀಗ ಜಡಿದು ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸೆಸ್ಕ್ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲ ಎಂಜಿನಿಯರ್ ಪರಮೇಶ್ವರಪ್ಪ ಮಾತನಾಡಿ, ನಲ್ಲಹಳ್ಳಿ, ಈರೇಗೌಡನಕೊಪ್ಪಲು ಗ್ರಾಮಗಳು ಪಾಂಡವಪುರ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿವೆ. ಈ ಗ್ರಾಮಗಳಿಗೆ ತಕ್ಷಣ ವಿದ್ಯುತ್ ಸರಬರಾಜು ಮಾಡಲಾಗುವುದು. ಆದರೆ  ಬಿಲ್ಲೇನಹಳ್ಳಿ, ಕೊಂತೇಗೌಡನಕೊಪ್ಪಲು ಗ್ರಾಮಗಳು ಮಂಡ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆ ವ್ಯಾಪ್ತಿಯ ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹರವು ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಿ.ಟಿ.ಮಂಜುನಾಥ್, ಮುಖಂಡರಾದ ಎಚ್.ಎನ್.ವಿಜಯಕುಮಾರ್, ಕೋಟಿ ಶಂಕರೇಗೌಡ, ಕೆನ್ನಾಳು ನಾಗರಾಜು, ಬಿ.ಟಿ.ಶಿವಣ್ಣ, ಗ್ರಾಮಸ್ಥರಾದ ಕುಮಾರ, ಈರೇಗೌಡ, ಯೋಗ, ರಾಮಕೃಷ್ಣ, ಬೋರೇಗೌಡ, ಶಿವಲಿಂಗ, ಮಹಾಲಿಂಗ, ಸುರೇಶ್, ಸವಿತಾ, ಲೀಲಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.