ADVERTISEMENT

ರೈತರಿಗೆ ಚುನಾವಣೆ ಬೇಡ, ನೀರು ಬೇಕು

ನಾಲೆಗಳಿಗೆ ಹರಿಯುತ್ತಿದ್ದ ಕೆಆರ್‌ಎಸ್‌ ನೀರು ನಿಲುಗಡೆ, ರೈತರ ಪ್ರತಿಭಟನೆ, ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 10:07 IST
Last Updated 16 ಏಪ್ರಿಲ್ 2018, 10:07 IST

ಮಂಡ್ಯ: ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ಹರಿಯುತ್ತಿದ್ದ ನೀರನ್ನು ಅವಧಿಗೂ ಮೊದಲೇ ನಿಲ್ಲಿಸಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ಪ‍್ರತಿಭಟನಾಕಾರರನ್ನು ಬಂಧಿಸಿದರು.

ವೇಳಾ ಪಟ್ಟಿಯಂತೆ ನೀರು ಹರಿಸದೇ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡಿದ್ದಾರೆ. ಗದ್ದೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಇನ್ನೂ ಸರಿಯಾಗಿ ನೀರು ಹರಿದಿಲ್ಲ. ಆಗಲೇ ನೀರು ತಪ್ಪಿಸಲಾಗಿದೆ. ಕಾವೇರಿ ಸಲಹಾ ಸಮಿತಿ ಸಭೆಯಲ್ಲಿ ನಿಗದಿಯಾದಂತೆ 15 ದಿನ ನೀರು ಹರಿಸಬೇಕಾಗಿತ್ತು.

ADVERTISEMENT

ಆದರೆ, ಕೇವಲ ಏಳು ದಿನ ಹರಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಕಷ್ಟದ ಮೇಲೆ ಕಷ್ಟ ಕೊಡುತ್ತಿದ್ದಾರೆ. ಬೇಸಿಗೆ ಬೆಳೆಗೆ ನೀರು ಕೊಡುವುದಾಗಿ ಭರವಸೆ ನೀಡಿ ಈಗ ನೀರು ನಿಲ್ಲಿಸಿದೆ. ಜಿಲ್ಲೆಯ ರೈತರಿಗೆ ಚುನಾವಣೆ ಬೇಕಿಲ್ಲ, ನಮಗೆ ಮೊದಲು ನೀರು ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾಡಳಿತಕ್ಕೂ, ಬ್ರಿಟಿಷ್‌ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಅಹಿಂಸಾ ಹೋರಾಟಕ್ಕೆ ಅವಮಾನ ಮಾಡುವ ಮೂಲಕ ನಮ್ಮನ್ನು ಬಂಧಿಸಲು ಮುಂದಾಗಿದ್ದಾರೆ. ಶಾಂತಿ ಯುತವಾಗಿ ಪ್ರತಿಭಟನೆ ಮಾಡುವುದಾಗಿ ಮನವಿ ಮಾಡಿದರೂ ನಮಗೆ ಅನುಮತಿ ನೀಡಿಲ್ಲ. ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ.

ರಸ್ತೆಯಲ್ಲಿ ಬೆಂಕಿ ಹಚ್ಚಿ, ಹೆದ್ದಾರಿಯಲ್ಲಿ ದನಕರು, ಎತ್ತಿನ ಗಾಡಿ ನಿಲ್ಲಿಸಿ ಪ್ರತಿಭಟನೆ ಮಾಡಬಹುದು. ಆದರೆ, ನಾವು ಅದನ್ನು ಮಾಡದೆ ಶಾಂತಿಯುತವಾಗಿ ಕೆಲ ನಿಮಿಷಗಳ ಕಾಲ ಪ್ರತಿಭಟನೆ ಮಾಡುತ್ತೇವೆ ಎಂದರೂ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ನೀರು ಹರಿಸುವ ಕುರಿತು ವೇಳಾಪಟ್ಟಿ ನಂಬಿಕೊಂಡು ರೈತರು ಭತ್ತ ಹಾಗೂ ಇತರೆ ಬೆಳೆ ನಾಟಿ ಮಾಡಿದ್ದಾರೆ. ಮನೆಯ ಒಡವೆ ಹಾಗೂ ಹೆಂಡತಿಯ ತಾಳಿ ಅಡವಿಟ್ಟು ಬೆಳೆ ನಾಟಿ ಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ರೈತರನ್ನು ರಕ್ಷಣೆ ಮಾಡಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ನೀರು ತಪ್ಪಿಸಿದ್ದಾರೆ. ಜಿಲ್ಲಾಡಳಿತ ಚುನಾವಣೆಯ ನೆಪವೊಡ್ಡಿ ಜಿಲ್ಲೆಯ ರೈತರಿಗೆ ಕೋಟ್ಯಂತರ ರೂಪಾಯಿ ಹಣ ನಷ್ಟ ಮಾಡಲು ಮುಂದಾಗಿದೆ.

ನಮ್ಮ ಬದುಕು ಕೊಚ್ಚಿಕೊಂಡು ಹೋಗುವಂತಹ ಸಂದರ್ಭದಲ್ಲಿ ಚುನಾವಣೆ ನಮಗೆ ಮುಖ್ಯವಲ್ಲ, ನಮಗೆ ನೀರು ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ಬೆಳೆಗೆ ಸರಿಯಾಗಿ ನೀರು ಹರಿಸದಿದ್ದರೆ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನೀರಾವರಿ ಕೊರತೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆದು ನಿಂತಿರುವ ಬೆಳೆಗೆ ನೀರು ಕೊಡದಿದ್ದರೆ ರೈತರು ಸುಮ್ಮನೇ ಇರುವುದಿಲ್ಲ. ರೈತರಿಗೆ ಚುನಾವಣೆಗಿಂತಲೂ ಹೊಟ್ಟೆಗೆ ಆಧಾರವಾಗಿರುವ ಬೆಳೆಗಳೇ ಮುಖ್ಯ. ಜಿಲ್ಲಾಡಳಿತ ಶೀಘ್ರ ನೀರು ಬಿಡಲು ಆದೇಶ ನೀಡಬೇಕು. ಇಲ್ಲದಿದ್ದರೆ ರೈತರು ಉಗ್ರ ಹೋರಾಟ ನಡೆಸುತ್ತಾರೆ.

ಇಲ್ಲಿ ಸೇರಿರುವ ರೈತರು ಸರ್ಕಾರದ ನಿಯಮಗಳಿಗೆ ಬೆಲೆ ಕೊಡುತ್ತೇವೆ. ಪೊಲೀಸರು ನಮ್ಮನ್ನು ಬಂಧಿಸಿದರೆ ನಾವು ಅದಕ್ಕೂ ಸಿದ್ಧರಾಗಿದ್ದೇವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿವುವು ನಮ್ಮ ಕರ್ತವ್ಯ ಎಂದು ಹೇಳಿದರು.

ಒಂದು ಸಾವಿರ ಕೋಟಿ ರೂಪಾಯಿ ಮಾಲ್ಯದ ಕಬ್ಬು ಹಾಗೂ ₹ 700 ಕೋಟಿಯಷ್ಟು ಭತ್ತ ಬೆಳೆಗೆ ನೀರು ಹರಿಸುವುದಾಗಿ ನೀರಾವರಿ ಸಲಹಾ ಸಮಿತಿ ತೀರ್ಮಾನ ಮಾಡಿದೆ.

ಏ.23 ರವರೆಗೆ ನೀರು ಹರಿಸುವುದಾಗಿ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ನಾವು ಜಿಲ್ಲೆಯಾದ್ಯಂದ ಸಂಚಾರ ಮಾಡುವಾಗ ರೈತರು ಕಾವೇರಿ ನೀರಿನ ವಿಚಾರವಾಗಿ ಚುನಾವಣೆ ಮುಂದೂಡಿ ಸಮರ್ಪಕವಾಗಿ ನೀರು ಹರಿಸಲು ವ್ಯವಸ್ಥೆ ಮಾಡಬೇಕು ಎಂದು ಹೇಳುತ್ತಾರೆ. ರೈತರಿಗೆ ಈಗ ಬದುಕಿನ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ನಾವು ಕಾನೂನಿನ ನಿಯಮಗಳನ್ನು ಗೌರವಿಸುತ್ತೇವೆ. ಶೀಘ್ರ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಜೆಪಿ ಮುಖಂಡ, ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ, ಚಂದ ಗಾಲು ಎನ್‌.ಶಿವಣ್ಣ, ಶ್ರೀಧರ್‌, ಇಂಡುವಾಳು ಸಿದ್ದೇಗೌಡ, ಬಸವರಾಜು, ಹನಯಂಬಾಡಿ ನಾಗ ರಾಜು, ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಹರ್ಷಮ ವಿವೇಕ್‌ ಹಾಜರಿದ್ದರು. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು 60ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದರು. ನಂತರ ಅವರನ್ನು ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಯಿತು.

ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ

‘ಏಳುದಿನಗಳ ಕಾಲ ನಾಲೆಗಳಿಗೆ ನೀರು ಹರಿಸಿದ್ದೇವೆ. ಈಗ ಜಲಾಶಯದಲ್ಲಿ ನೀರು ಕಡಿಮೆಯಾದ ಕಾರಣ ನೀರು ತಪ್ಪಿಸಿದ್ದೇವೆ. ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಕಡಿಮೆಯಾಗಿದೆ. ಜಲಾಶಯದಿಂದ ಹೊರಗೆ ನೀರು ಹರಿಸುವುದೂ ಕುಗ್ಗಿದೆ. ಹೀಗಾಗಿ ನೀರು ನಿಲ್ಲಿಸಿದ್ದೇವೆ. ಮುಂದೆ ಬೇಸಿಗೆ ಬೆಳೆಗಳಿಗೆ ನೀರು ಹರಿಸುವ ಕುರಿತು ಮೇಲಿನ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.