ADVERTISEMENT

ರೈತರಿಗೆ ಹಾಲಿನ ಬೆಲೆ ಇಳಿಕೆಯ ಬರೆ

ಬಸವರಾಜ ಹವಾಲ್ದಾರ
Published 3 ಡಿಸೆಂಬರ್ 2012, 8:21 IST
Last Updated 3 ಡಿಸೆಂಬರ್ 2012, 8:21 IST

ಮಂಡ್ಯ: ಎಂಟು ತಿಂಗಳ ಹಾಲಿನ ಬಿಲ್ ಬಾಕಿ ಪಾವತಿಸಲು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಮನ್‌ಮುಲ್) ಸಿದ್ಧವಾ ಗುತ್ತಿದೆ ಎಂಬ ಖುಷಿಯೊಂದಿಗೆ, ಸತತ ಮೂರನೇ ಬಾರಿಗೆ ಹಾಲಿನ ದರ ಇಳಿಸುವ ಕ್ರಮಕ್ಕೂ ಮುಂದಾಗಿದೆ.

ಕಳೆದ ಐದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ತಾತ್ಕಾಲಿಕ ಎನ್ನುತ್ತಲೇ ಹಾಲಿನ ದರ ಇಳಿಸುವ ಪ್ರಸ್ತಾವನೆಗೆ ಒಕ್ಕೂಟದ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ವ್ಯವಸ್ಥಾಪಕ ನಿರ್ದೇಶಕರ ಅಂಕಿತವೊಂದೇ ಬಾಕಿ ಉಳಿದಿದೆ.

ಹಾಲಿನ ಪುಡಿ ಹಾಗೂ ಬೆಣ್ಣೆ ಮಾರಾಟವಾಗದೇ ಉಳಿದಿದೆ ಎಂಬ ಕಾರಣಕ್ಕೆ 20.50 ಲೀಟರ್‌ನಂತೆ ತೆಗೆದುಕೊಳ್ಳುತ್ತಿದ್ದ ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ 1.75 ಪೈಸೆ ಇಳಿಸಲಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ಪ್ರತಿ ಲೀಟರ್‌ಗೆ 1 ರೂಪಾಯಿ ಇಳಿಸುವ ಮೂಲಕ 17.75 ರೂಪಾಯಿ ನೀಡಲಾಗುತ್ತಿತ್ತು. ಈಗ ಮತ್ತೆ 50 ರಿಂದ 75 ಪೈಸೆ ಪ್ರತಿ ಲೀಟರ್‌ಗೆ ಇಳಿಸಲು ನಿರ್ಧರಿಸಲಾಗಿದೆ.

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 3 ಸಾವಿರ ಮೆಟ್ರಿಕ್ ಟನ್ ಪೌಡರ್ ಹಾಗೂ 800 ಮೆಟ್ರಿಕ್ ಟನ್ ಬೆಣ್ಣೆ ಉಳಿದು ಕೊಂಡಿದೆ. ಪರಿಣಾಮ ರೈತರಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ.
ಜಿಲ್ಲೆಯಲ್ಲಿ 11 ಸಾವಿರಕ್ಕೂ ಹೆಚ್ಚು ಹಾಲು ಪೂರೈಕೆಯ ಸಂಘಗಳಿವೆ. ಅವುಗಳಿಂದ ನಿತ್ಯ 5.40 ಲಕ್ಷ ಲೀಟರ್ ಹಾಲು ಮನ್‌ಮಲ್ ಸಂಗ್ರಹಿಸುತ್ತಿದೆ. ಕಳೆದ ಎಂಟು ವಾರಗಳಿಂದ ಅವುಗಳಿಗೆ ಪಾವತಿಸ ಬೇಕಿದ್ದ 56 ಕೋಟಿ ರೂಪಾಯಿ ಬಾಕಿ ಉಳಿದಿದೆ.

ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆಯಾಗಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ ಮೂಲಕ 40 ಕೋಟಿ ರೂಪಾಯಿ ಸಾಲ ಕೊಡಿಸಲು ಮುಂದಾಗಿದೆ. ಶೇ 4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಧಿಸುವ ಬಡ್ಡಿಯನ್ನು ರಾಜ್ಯ ಸರ್ಕಾರ ಭರಿಸಲಿದೆ ಎನ್ನುತ್ತಾರೆ ಮನ್‌ಮುಲ್ ಅಧ್ಯಕ್ಷ ಎಂ.ಬಿ. ಹರೀಶ್.

ಜತೆಗೆ ಹಾಲಿನ ಪುಡಿ ಹಾಗೂ ಬೆಣ್ಣೆ ಮಾರಾಟದಿಂದ ಆಗುವ ನಷ್ಟದ ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಿಕೊಡಲಿದೆ. ಸಾಲ ಮಂಜೂರಾಗುತ್ತಿದ್ದಂತೆಯೇ ರೈತರ ಹಾಲಿನ ಬಿಲ್ ಬಾಕಿ ಪಾವತಿಸಲಾಗುವುದು. ನಂತರವಷ್ಟೇ ಆಡಳಿತ ಮಂಡಳಿ ನಿರ್ಧರಿಸಿದ ಬೆಲೆ ಇಳಿಕೆ ಪ್ರಸ್ತಾವವನ್ನು ವ್ಯವಸ್ಥಾಪಕ ನಿರ್ದೇಶಕರು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುತ್ತಾರೆ ಅವರು.

ಮಳೆರಾಯನ ಅವಕೃಪೆ: ಮಳೆರಾಯನ ಮುನಿಸಿನಿಂದಾಗಿ ಮುಂಗಾರಿನ ಬೆಳೆಗಳು ಸರಿಯಾಗಿ ಕೈಗೆ ಹತ್ತಲಿಲ್ಲ. ಹಿಂಗಾರಿನ ಬೆಳೆಯೂ ಒಣಗತೊ ಡಗಿದೆ. ಹೀಗಾಗಿ, ಹೈನುಗಾರಿಕೆಯನ್ನು ಉಪಕಸು ಬಾಗಿಸಿಕೊಂಡಿರುವ ಲಕ್ಷಾಂತರ ಕುಟುಂಬಗಳು ಹಾಲಿನ ಮಾರಾಟದಿಂದ ಬರುವ ಹಣದಿಂದಲೇ ಕುಟುಂಬವನ್ನು ಸಾಗಿಸುತ್ತಿವೆ.

ಜಿಲ್ಲೆಯಲ್ಲಿ ಬರಗಾಲವಿರುವುದರಿಂದ ಒಂದೆಡೆ ಮೇವು ಸೇರಿದಂತೆ ಪಶು ಆಹಾರದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಹಾಲಿನ ಬೆಲೆಯನ್ನು ಸತತವಾಗಿ ಇಳಿಸಲಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

`ಪ್ರತಿ ಲೀಟರ್‌ಗೆ 2 ರೂ. ಪ್ರೋತ್ಸಾಹ ಧನ ದೊಂದಿಗೆ ವಿವಿಧ ಉತ್ತೇಜಕ ಕ್ರಮಗಳನ್ನು ಕೈಗೊಂಡಿದ್ದರಿಂದ ಹಸುಗಳನ್ನು ತಂದು ಸಾಕಿದ್ದೇವೆ. ಆದರೆ, ಈಗ ಸತತವಾಗಿ ಬೆಲೆ ಇಳಿಸುತ್ತಿರುವುದರಿಂದ ನಿರ್ವಹಣೆ ಸಾಧ್ಯವಾಗದೇ ಸಾಲದ ಸುಳಿಗೆ ಸಿಲುಕಿತ್ತಿದ್ದೇವೆ. ಮಾರುಕಟ್ಟೆ ಕಂಡುಕೊಳ್ಳದ ತಮ್ಮ ತಪ್ಪಿಗೆ, ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ' ಎಂದು ದೂರುತ್ತಾರೆ ಹನಕೆರೆಯ ರೈತ ಪ್ರಕಾಶ್.

ಸಂಗ್ರಹಿಸಿದ ಹಾಲಿಗೆ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಹಸುಗಳನ್ನು ಮಾರಾಟ ಮಾಡಲು ಸೂಚಿಸಿ ಬಿಡಿ. ಅದು ಬಿಟ್ಟು ಬೆಲೆ ಇಳಿಸಿ ತೊಂದರೆ ನೀಡುತ್ತಿರುವುದು ಏಕೆ ಎಂದು ಹಾಲು ಉತ್ಪಾದಕರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.