ADVERTISEMENT

ವಿತರಣೆಯಾಗದ ವಿದ್ಯಾರ್ಥಿ ವೇತನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:40 IST
Last Updated 18 ಅಕ್ಟೋಬರ್ 2011, 9:40 IST

ಮದ್ದೂರು: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮರ್ಪಕವಾಗಿ ವಿತರಣೆ ಆಗದಿರುವ ಬಗೆಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಸೋಮವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ತಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಚೌಡಮ್ಮ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಈ ಕುರಿತು ಸದಸ್ಯ ರಾಮಚಂದ್ರು ವಿಷಯ ಪ್ರಸ್ತಾಪಿಸಿದರು. ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಡ ವಿದ್ಯಾರ್ಥಿನಿ ರಂಜಿನಿಗೆ ಕಳೆದ 2 ವರ್ಷಗಳಿಂದ ವಿದ್ಯಾರ್ಥಿ ವೇತನ ವಿತರಿಸಿಲ್ಲ ಎಂದು ಆರೋಪಿಸಿದಾಗ ಉಳಿದ ಸದಸ್ಯರು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ವೇತನ ಬಾರದಿರುವ ಬಗೆಗೆ ಸಭೆಯ ಗಮನ ಸೆಳೆದರು.

ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕುವ ಸವಲತ್ತುಗಳ ಬಗೆಗೆ ಗೊತ್ತಿಲ್ಲ. ಕೂಡಲೇ ಎಲ್ಲ ಸದಸ್ಯರಿಗೆ ಇಲಾಖೆಯಿಂದ ದೊರಕುವ ಸವಲತ್ತುಗಳ ಮಾಹಿತಿ ನೀಡಿ ಎಂದು ಸದಸ್ಯರು ಸಮಾಜ ಕಲ್ಯಾಣಾಧಿಕಾರಿ ನಾಗರಾಜು ಅವರನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಗರಾಜು, ಶಾಲಾ ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿ ವೇತನ ಅರ್ಜಿ ಭರ್ತಿ ಮಾಡಿ ಸಲ್ಲಿಸುವಲ್ಲಿ ಲೋಪ ಮಾಡಿರುವುದರಿಂದ ಕೆಲವು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿ ವೇತನ ವಿತರಣೆ ವಿಳಂಬವಾಗಿದೆ. ಸಮರ್ಪಕವಾಗಿ ಅರ್ಜಿ ಭರ್ತಿ ಮಾಡಿ ದಾಖಲಾತಿ ಸಲ್ಲಿಸಿದರೆ ಹಣ ಬಿಡುಗಡೆ ಮಾಡುವುದಾಗಿ ಸ್ಪಷ್ಟನೆ ನೀಡಿದರು.

ಇದೇ ಸಂದರ್ಭದಲ್ಲಿ ಹಣಕಾಸು ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಗಳು ನಡೆದವು. ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯರಾದ ಶೋಭ ಆನಂದ್, ಗಂಗಾ ಬಲರಾಂ, ಕೆ.ಎಂ.ಧನಂಜಯ, ಜ್ಯೋತಿ, ಸುಜಾತ ಮರಿಲಿಂಗಯ್ಯ, ತಾಲ್ಲೂಕು ಕೈಗಾರಿಕಾಧಿಕಾರಿ ಅಜಿತ್, ವಿಸ್ತರಣಾಧಿಕಾರಿ ರಾಮಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಷ್ಮ, ಶಿಕ್ಷಣ ಸಂಯೋಜಕ ಫಕ್ರುದ್ದಿನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.