ADVERTISEMENT

ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:45 IST
Last Updated 14 ಸೆಪ್ಟೆಂಬರ್ 2011, 9:45 IST

ಕೃಷ್ಣರಾಜಪೇಟೆ: ಸ್ವಾತಂತ್ರ್ಯ ಬಂದು ಆರು ದಶಕಗಳಾದರೂ 40 ಲಕ್ಷ ಜನಸಂಖ್ಯೆ ಇರುವ ವಿಶ್ವಕರ್ಮ ಜನಾಂಗದ ಒಬ್ಬ ವ್ಯಕ್ತಿಯೂ ಉನ್ನತ ರಾಜಕೀಯ ಸ್ಥಾನಮಾನ ಹೊಂದಲು ಸಾಧ್ಯವಾಗದಿರುವುದು ನಮ್ಮನ್ನಾಳಿದ ಸರ್ಕಾರಗಳು ನಮಗೆ ನೀಡಿರುವ ಕೊಡುಗೆಯಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ವಿಷಾದಿಸಿದರು.

ಮೈಸೂರಿನಲ್ಲಿ ಸೆ. 17ರಂದು ನಡೆಯಲಿರುವ 3ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ಪಟ್ಟ ಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ನೆರವು ಪಡೆಯಲು ಕಾತರಿಸುವ ರಾಜಕೀಯ ಪಕ್ಷಗಳು ಇದುವರೆಗೂ ನಮಗೆ ಯಾವುದೇ ರಾಜಕೀಯ ಸ್ಥಾನಮಾನ ನೀಡುವ ಬಗ್ಗೆ ಚಿಂತಿಸಲಿಲ್ಲ. ಸಮಾಜಕ್ಕೆ ಬಹು ಉಪಯೋಗಿಯಾಗಿರುವ ವಿಶ್ವಕರ್ಮ ಜನಾಂಗದ ಮೂಲ ಪುರುಷರಾದ ವಿಶ್ವಕರ್ಮರ ಜಯಂತಿಯನ್ನು ಆಚರಿಸುವ ಸೌಜನ್ಯವನ್ನೂ ಸರ್ಕಾರಗಳು ತೋರಲಿಲ್ಲ.
 
ಇದರಿಂದಾಗಿ ಜನಾಂಗದ ಬಂಧುಗಳೇ ವಿಶ್ವಕರ್ಮ ಜಯಂತಿಯನ್ನು ನಡೆಸಲು ಮನಸ್ಸು ಮಾಡಬೇಕಾಯಿತು. ಯಾವುದೇ ಅಪ ಪ್ರಚಾರಗಳಿಗೆ ಕಿವಿಗೊಡದೆ ಜನಾಂಗದ ಬಂಧುಗಳು ಸಂಘಟಿತರಾಗಬೇಕು. ಜನಾಂಗದ ಶಕ್ತಿಯೇನು ಎಂಬುದನ್ನು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಡಲು ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನರು ಜಯಂತ್ಯುತ್ಸವದಲ್ಲಿ ಭಾಗವಹಿಸಲಿದ್ದಾರೆ. ತಾಲ್ಲೂಕಿನಿಂದಲೂ 5 ಸಾವಿರಕ್ಕಿಂತ ಹೆಚ್ಚಿನ ಜನರು ಕಾರ್ಯಕ್ರಮಕ್ಕೆ ಬರಬೇಕು ಎಂದು ಮನವಿ ಮಾಡಿದರು.

ಆದಿಶಕ್ತಿ ಮಹಾಸಂಸ್ಥಾನ ಮಠದ ನೀಲಕಂಠಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಸತೀಶ್, ಕಾರ್ಯದರ್ಶಿ ವೈ.ಡಿ.ಶ್ರೀನಿವಾಸ ಮೂರ್ತಿ, ತಾಲ್ಲೂಕು ಅಧ್ಯಕ್ಷ ಪರಮೇಶ್ವರ, ಜನಾಂಗದ ಮುಖಂಡರಾದ ಧಾರವಾಡದ ಶಿವಣ್ಣ ಬಡಿಗೇರ, ಅಕ್ಕಿಹೆಬ್ಬಾಳು ವಿಶ್ವನಾಥ್, ಕಿಕ್ಕೇರಿ ಜಗದೀಶ್, ತಾಲ್ಲೂಕು ಮರಗೆಲಸ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಸಾಹಿತಿ ಕೆ.ಜಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.