ಮಂಡ್ಯ: ಅರಣ್ಯ ಇಲಾಖೆಯು ದಿನಗೂಲಿ ನೌಕರರ ಬಗೆಗೆ ತಾರತಮ್ಯ ನೀತಿಯನ್ನು ಹೊಂದಿದ್ದು ಎಂದು ಆರೋಪಿಸಿರುವ ದಿನಗೂಲಿ ನೌಕರರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಸೋಮವಾರ ಮಂಡ್ಯದಲ್ಲಿ ಇಲಾಖೆಯ ಕಚೇರಿಯ ಎದುರು ಧರಣಿ ಪ್ರತಿಭಟನೆಯನ್ನು ನಡೆಸಿದರು.
1-7-1984ಕ್ಕೂ ಮುನ್ನ ದಿನಗೂಲಿ ನೌಕರರಾಗಿ ಸೇರಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಾಹಿತಿ ಕಳುಹಿಸುವಂತೆ ಸರ್ಕಾರ ಕೋರಿದ್ದರೂ, ಜಿಲ್ಲಾವಾರು ಇಂಥ ಮಾಹಿತಿ ಕಳುಹಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ನೌಕರರು ದೂರಿದ್ದಾರೆ.
ಇದೂ ಸೇರಿ ಒಟ್ಟು ನಾಲ್ಕು ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿರುವ ನೌಕರರು, ಈ ಬಗೆಗೆ ಹಲವು ಮನವಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಈಗ ಬೇಡಿಕೆ ಈಡೇರುವ ತನಕ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ನೌಕರರು, ಪುನರಾವರ್ತಿತ ಪ್ರತಿಭಟನೆಯ ನಂತರವೂ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಂಡ್ಯ ವಿಭಾಗದಲ್ಲಿಯೇ ಕಳೆದ ಮೂರು ವರ್ಷಗಳಿಂದ ಪಿಸಿಪಿ ನೌಕರರಿಗೆ ವಿವಿಧ ವಲಯಗಳಲ್ಲಿ ಕಡಿಮೆ ಮಂಜೂರಿ ಮಾಡಲಾಗಿದೆ. ಈ ವ್ಯತ್ಯಾಸದ ಮಜೂರಿಯನ್ನು ಆದಷ್ಟು ಶೀಘ್ರ ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂಘದ ಮುಖಂಡರಾದ ಎ.ಎಂ.ನಾಗರಾಜು, ಉಪಾಧ್ಯಕ್ಷ ನಾಗರಾಜನಾಯ್ಕ, ಗಂಗಾಧರಯ್ಯ, ಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.