ADVERTISEMENT

ವೈಭವದ ವೆಂಕಟರಮಣಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 10:45 IST
Last Updated 8 ಫೆಬ್ರುವರಿ 2012, 10:45 IST

ನಾಗಮಂಗಲ: ತಾಲ್ಲೂಕಿನ ಸಾಲಾದ್ರಿ ಕ್ಷೇತ್ರ ಎಂದೇ ಖ್ಯಾತಿ ಪಡೆದ ಕೋಟೆ ಬೆಟ್ಟದಲ್ಲಿ ಮಂಗಳವಾರ ವೆಂಕಟರಮಣಸ್ವಾಮಿ ರಥೋತ್ಸವ ವೈಭವದಿಂದ ನಡೆಯಿತು.

ಕೋಟೆಬೆಟ್ಟದ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು. ವೆಂಕಟರಮಣಸ್ವಾಮಿಯ ತೇರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ತೇರು ಎಳೆದ ಭಕ್ತರು ಸಂತಸ ವ್ಯಕ್ತ ಪಡಿಸಿದರು.

ವ್ಯಾಪಾರ ಜೋರು: ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಣ್ಣ-ಪುಟ್ಟ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ತಿನಿಸು, ಆಟಿಕೆ ಅಂಗಡಿಗಳ ಮುಂದೆ ಜನ ಸಾಗರವೇ ನೆರೆದಿತ್ತು. ರಥೋತ್ಸವದ ಕೊನೆಯಲ್ಲಿ ಉತ್ತಮ ರಾಸುಗಳು ಎಂದು ಪರಿಗಣಿಸಿ ಹೂವಿನಹಳ್ಳಿ ಕೃಷ್ಣೇಗೌಡರ ರಾಸುಗಳು ಪ್ರಥಮ ಸ್ಥಾನದೊಂದಿಗೆ 5 ಸಾವಿರ ನಗದು, ಬಳ್ಳೆಕೆರೆ ರಾಜಣ್ಣ ಅವರ ರಾಸುಗಳು ದ್ವಿತೀಯ ಸ್ಥಾನವಾಗಿ 3 ಸಾವಿರ ನಗದು, ನಾಗಮಂಗಲದ ಕೆಂಪಣ್ಣ ಅವರ ರಾಸುಗಳು ತೃತೀಯ ಸ್ಥಾನದೊಂದಿಗೆ 2 ಸಾವಿರ ನಗದು ಬಹುಮಾನ ನೀಡಲಾಯಿತು.

9ರಂದು ಪಾರಂಪರಿಕ ಚಿಕಿತ್ಸಾ ಕಾರ್ಯಾಗಾರ
ಮೈಸೂರು: ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಮ್ಮೇಳನದ ಪೂರ್ವಭಾವಿಯಾಗಿ `ಪಾರಂಪರಿಕ ಚಿಕಿತ್ಸಾ ಪದ್ಧತಿಗಳು ಹಾಗೂ ಸ್ವಾಸ್ಥ್ಯಯೋಗ~ ಕುರಿತು ಕಾರ್ಯಾಗಾರ ಫೆ. 9ರಂದು ಬೆಳಿಗ್ಗೆ 10ಕ್ಕೆ ಯಾದವಗಿರಿಯ ಹೋಟೆಲ್ ದಾಸ್‌ಪ್ರಕಾಶ್ ಪ್ಯಾರಡೈಸ್‌ದಲ್ಲಿ ನಡೆಯಲಿದೆ. 

  ಪಾರಂಪರಿಕ ವೈದ್ಯ ಪರಿಷತ್‌ನ ಸುಮಾರು 30 ಜನ ವೈದ್ಯರು ತಮ್ಮ ವೈದ್ಯ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ ನೀಡುವರು.

ಡಾ.ಬಿ.ಆರ್.ಪೈ ಹಾಗೂ ವೈದ್ಯರು ನೇತೃತ್ವ ವಹಿಸುವರು. ಹೆಚ್ಚಿನ  ಮಾಹಿತಿ ಮತ್ತು ನೋಂದಣಿಗಾಗಿ        0821-2412284 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.