ADVERTISEMENT

ಶಾಸಕರಿಗೆ ರೂ 17 ಕೋಟಿ ಕಪ್ಪ: ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:30 IST
Last Updated 1 ಜೂನ್ 2011, 9:30 IST
ಶಾಸಕರಿಗೆ ರೂ 17 ಕೋಟಿ ಕಪ್ಪ: ಪುಟ್ಟಣ್ಣಯ್ಯ
ಶಾಸಕರಿಗೆ ರೂ 17 ಕೋಟಿ ಕಪ್ಪ: ಪುಟ್ಟಣ್ಣಯ್ಯ   

ಶ್ರೀರಂಗಪಟ್ಟಣ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೊಠಾರಿ ಶುಗರ್ಸ್‌ ಕಂಪೆನಿಗೆ ಗುತ್ತಿಗೆ ಕೊಡಿಸುವ ಹಾಗೂ 30 ವರ್ಷಕ್ಕೆ ಗುತ್ತಿಗೆ ವಿಸ್ತರಿಸುವ ಪ್ರಕ್ರಿಯೆಯಲ್ಲಿ ಮೇಲು ಕೋಟೆ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಗಳ ಶಾಸಕರು ರೂ.17 ಕೋಟಿ ಕಪ್ಪ ಪಡೆದಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಗಂಭೀರ ಆರೋಪ ಮಾಡಿದರು.

ಜೂ.11ರಂದು ಮಂಡ್ಯದಲ್ಲಿ ನಡೆಯಲಿರುವ ಭ್ರಷ್ಟಾಚಾರ ವಿರೋಧಿ ಅಂದೋಲನ ಸಮಾವೇಶದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತ ನಾಡಿದರು. ಸಹಕಾರ ಕ್ಷೇತ್ರದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿ ಯವರಿಗೆ ವಹಿಸುವಂತೆ ಈ ಇಬ್ಬರು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮುಖ ್ಯಮಂತ್ರಿಗಳು ಕರೆದಿದ್ದ ಜನಪ್ರತಿನಿಧಿಗಳು ಹಾಗೂ ರೈತರ ಸಭೆಯಲ್ಲಿ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿ ಎಂದು ನೇರವಾಗಿ ಹೇಳಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು. ಮತ್ತೊಂದೆಡೆ ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವ ದೇವೇಗೌಡರ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಹೊಳೆ ನರಸೀಪುರದಲ್ಲಿ ಟನ್ ಕಬ್ಬನ್ನು ರೂ.500ಕ್ಕೂ ಕೇಳುವವರಿಲ್ಲ. ಮಣ್ಣಿನ ಮಕ್ಕಳಿಗೆ ತವರಿನ ರೈತರ ಸಮಸ್ಯೆ ಗೊತ್ತಿಲ್ಲವೆ? ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್ ಪಿಎಸ್‌ಎಸ್‌ಕೆ ಕಾರ್ಖಾನೆವ ಯನ್ನು ಅಧೋಗತಿಗೆ ತಳ್ಳಿದೆ. ಆ ಪಕ್ಷದ ಹಿಡಿತದಲ್ಲಿದ್ದ ವೇಳೆ ರೂ.110 ಕೋಟಿ ನಷ್ಟ ಉಂಟಾಗಿದೆ. ರೈತಸಂಘ ಕಾರ್ಖಾನೆಗೆ ಸುಧಾರಣೆ ತಂದಿದೆ. ಆದರೂ ಜೆಡಿಎಸ್ ಅವಧಿಯಲ್ಲಿ ನಡೆದ ಅಕ್ರಮಗಳಿಂದ ಉಂಟಾದ ಪರಿಣಾಮ ಈಗಲೂ ಮುಂದುವರೆದಿದ್ದು, ಕಾರ್ಖಾನೆ ದುಃಸ್ಥಿತಿಗೆ ಆ ಪಕ್ಷದ ಮುಖಂ ಡರೇ ಹೊಣೆ ಎಂದು ದೂರಿದರು. 

 ಸಂಸದ ಎನ್.ಚೆಲುವರಾಯಸ್ವಾಮಿ ಅವರ ಯಾವ ಘನ ಸಾಧನೆಗೆ ಮಂಡ್ಯದಲ್ಲಿ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಎಂಬುದಕ್ಕೆ ಅವರೇ ಉತ್ತರ ಹೇಳಬೇಕು ಎಂದು ವ್ಯಂಗವಾಡಿ ದರು.

ರೈತ ಮುಖಂಡ ಕೆ.ಎಸ್.ನಂಜುಂಡೇ ಗೌಡ ಮಾತನಾಡಿ, ಜೂ.11ರಂದು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಭ್ರಷ್ಟಾಚಾರ ವಿರೋಧಿ ಅಂದೋ ಲನ ಸಮಾವೇಶ ನಡೆಯಲಿದೆ. ಎಚ್.ಎಸ್.ದೊರೆಸ್ವಾಮಿ, ಬಿ.ಟಿ.ಲಲಿತಾ ನಾಯಕ್, ಎ.ಕೆ. ಸುಬ್ಬಯ್ಯ, ದೇವ ನೂರು ಮಹದೇವ, ರಮೇಶ್ ಕುಮಾರ್ ಇತರರು ಆಗಮಿಸಲಿದ್ದಾರೆ. ರೈತಸಂಘ, ಕರ್ನಾಟಕ ಜನಪರ ವೇದಿಕೆ, ದಲಿತ ಸಂಘರ್ಷ ಸಮಿತಿ ಇತರ ಪ್ರಗತಿ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ಸ್ವಾಮಿಗೌಡ, ಜಯ ರಾಮೇಗೌಡ, ಬಿ.ಎಸ್.ರಮೇಶ್, ಪಾಂಡು, ವೆಂಕಟೇಶ್, ದರಸಗುಪ್ಪೆ ಜಯರಾಂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.