ADVERTISEMENT

ಶೇ 90.11 ಮತದಾನ: ಇಂದು ಫಲಿತಾಂಶ

ಒಕ್ಕಲಿಗರ ಸಂಘದ ಚುನಾವಣೆ: ಮದ್ದೂರಿನಲ್ಲಿ ಹೆಚ್ಚು ಮತದಾನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:05 IST
Last Updated 6 ಜನವರಿ 2014, 5:05 IST

ಮಂಡ್ಯ: ಜಿಲ್ಲೆಯಲ್ಲಿ, ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ನಾಲ್ಕು ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 90.11ರಷ್ಟು ಮತದಾನ ಆಗಿದೆ.

ಮಂಡ್ಯ ತಾಲ್ಲೂಕಿನಲ್ಲಿ ಶೇ 88.13. ಮದ್ದೂರು ಶೇ 91.92, ಮಳವಳ್ಳಿ ಶೇ 91.22, ಪಾಂಡವಪುರ ಶೇ 89.81, ಶ್ರೀರಂಗಪಟ್ಟಣ ಶೇ 90.59, ಕೃಷ್ಣರಾಜಪೇಟೆ ಶೇ 88.68 ಹಾಗೂ ನಾಗಮಂಗಲದಲ್ಲಿ ಶೇ 91.64ರಷ್ಟು ಮತ ಚಲಾವಣೆಯಾಗಿದೆ.

ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾದರೆ, ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಚುರುಕುಗೊಂಡಿತು.

ಒಟ್ಟು 37,881 ಮತದಾರರ ಪೈಕಿ 34,138 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 5,996 ಮಹಿಳೆಯರು ಸೇರಿದ್ದಾರೆ ಎಂದು ಚುನಾವಣಾಧಿಕಾರಿ ಪಿ. ಶಶಿಧರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ 24, ಮದ್ದೂರಿನಲ್ಲಿ 17, ನಾಗಮಂಗಲದಲ್ಲಿ 14, ಮಳವಳ್ಳಿಯಲ್ಲಿ 7 ಹಾಗೂ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಕೃಷ್ಣರಾಜಪೇಟೆಯಲ್ಲಿ ತಲಾ 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮಂಡ್ಯದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲುಕಟ್ಟಡ), ಮದ್ದೂರಿನಲ್ಲಿ ಎಚ್‌.ಕೆ. ವೀರಣ್ಣ ಗೌಡ ಕಾಲೇಜು, ಮಳವಳ್ಳಿಯಲ್ಲಿ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ, ನಾಗಮಂಗಲ, ಪಾಂಡಪವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಕೃಷ್ಣರಾಜಪೇಟೆಯಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮನವೊಲಿಕೆ ಯತ್ನ: ಮತಕೇಂದ್ರದ ಬಳಿ ಅಭ್ಯರ್ಥಿಗಳು–ಬೆಂಬಲಿಗರು, ಮತದಾರರ ಮನವೊಲಿಸುವ ಕಡೇ ಕ್ಷಣದ ಪ್ರಯತ್ನಕ್ಕೆ ಮುಂದಾಗಿದ್ದರು. ಬಿಸಿಲಿನ ತಾಪದಿಂದ ಪಾರಾಗಲು ಅಲ್ಲಲ್ಲಿ ಶಾಮಿಯಾನ ಹಾಕಲಾಗಿತ್ತು. ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದ್ದರು.

ಪೊಲೀಸ್‌ ಪಹರೆ: ಅಹಿತರ ಘಟನೆಗಳು ಜರುಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಎಲ್ಲ ಮತಗಟ್ಟೆಗಳ ಬಳಿ ಪೊಲೀಸ್‌ ಪಹರೆಯನ್ನು ಬಿಗಿಗೊಳಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳು ಮತಕೇಂದ್ರಗಳ ಬಳಿ ಸುತ್ತಹಾಕಿ ಪರಿಸ್ಥಿತಿ ಅವಲೋಕಿಸಿದರು.

ಸಂಚಾರ ತ್ರಾಸ: ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಸಾಕಷ್ಟು ಅನಾನುಕೂಲ ಆಯಿತು. ಪರಿಣಾಮ, ವಾಹನಗಳ ಸಾಲು ಸಾಕಷ್ಟು ಉದ್ದವಿತ್ತು. ಸಂಚಾರಿ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಹೆಣಗಬೇಕಾಯಿತು. ವಾಹನಗಳು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿದ್ದವು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.