ADVERTISEMENT

ಶೈಕ್ಷಣಿಕ ಸಿದ್ಧತೆ ಪರೀಕ್ಷೆಗೆ `ಮಿಂಚಿನ ಸಂಚಾರ'

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 11:30 IST
Last Updated 1 ಜೂನ್ 2013, 11:30 IST

ಶ್ರೀರಂಗಪಟ್ಟಣ: ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಶುಕ್ರವಾರದಿಂದ ಅಧಿಕೃತವಾಗಿ ಆರಂಭವಾಗಿದ್ದು, ಶಾಲಾ ಚಟುವಟಿಕೆಗಳ ಸಿದ್ಧತೆ ಪರಿಶೀಲನೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ತಂಡ ಮಿಂಚಿನ ಸಂಚಾರ ಹಮ್ಮಿಕೊಂಡಿದೆ.

ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಪರಿಸರದ ಬಗ್ಗೆ ಈ ತಂಡ ಶಾಲಾ ಮುಖ್ಯಸ್ಥರಿಂದ ಮಾಹಿತಿ ಪಡೆಯುತ್ತಿದೆ. ಮಕ್ಕಳನ್ನು ಸರ್ಕಾರಿ ಶಾಲೆಗಳೆಡೆಗೆ ಆಕರ್ಷಿಸಲು ಕೈಗೊಂಡ ಜಾಥಾ ಇತರ ಪ್ರೇರಣಾ ಕಾರ್ಯಕ್ರಮಗಳು, ಪಾಠ ಯೋಜನೆಗೆ ಶಿಕ್ಷಕರ ಸಿದ್ಧತಾ ಮಟ್ಟವನ್ನು ಪರೀಕ್ಷಿಸಲಿದೆ.

ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಪ್ರಯೋಗಾಲಯ, ಶಾಲಾ ಕೈ ತೋಟವನ್ನು ಸಜ್ಜುಗೊಳಿಸುವಂತೆ ಸಲಹೆ ನೀಡಲಿದೆ. ಮಿಂಚಿನ ಸಂಚಾರ ತಂಡದಲ್ಲಿ ಕ್ಲಸ್ಟರ್ ಹಾಗೂ ಬ್ಲಾಕ್ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕರು ಹಾಗೂ ಜಿಲ್ಲಾಮಟ್ಟದ ಒಬ್ಬ ಅಧಿಕಾರಿ ಇರುತ್ತಾರೆ.

ಜೂನ್ 8ರವರೆಗೆ ಮಿಂಚಿನ ಸಂಚಾರ ಕಾರ್ಯಕ್ರಮ ನಡೆಯಲಿದೆ. ಜೂನ್ 3ನೇ ವಾರದವರೆಗೆ ಸೇತುಬಂಧ ನಡೆಸಿ ನಂತರ ಹೊಸ ಪಠ್ಯಕ್ರಮ ಶುರು ಮಾಡುವಂತೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.

ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಹಾಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಲೋಪ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಶುಕ್ರವಾರ ಇಲ್ಲಿಗೆ ಸಮೀಪದ ಗಂಜಾಂನ ಸರ್ಕಾರಿ ಮೀನುಗಾರಿಕಾ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು. ಎಂ.ಆರ್. ಸುರೇಶ್, ರಂಗನಾಥ್ ಇತರರು ಇದ್ದರು.

ವಿತರಣೆ!: ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ, 2012-13ನೇ ಶೈಕ್ಷಣಿಕ ವರ್ಷದಲ್ಲಿ ವಿತರಿಸಬೇಕಿದ್ದ ಸಮವಸ್ತ್ರವನ್ನು ಈ ಬಾರಿ ವಿತರಿಸಲಾಗುತ್ತಿದೆ.

ತಾಲ್ಲೂಕಿನ ಕೆ.ಶೆಟ್ಟಹಳ್ಳಿ, ಗಂಜಾಂ, ಅರಕೆರೆ ಇತರೆಡೆ ಶುಕ್ರವಾರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಸಮವಸ್ತ್ರ ವಿತರಿಸಲಾಗಿದೆ. 2012-13ನೇ ಸಾಲಿನ ಸಮವಸ್ತ್ರ ಶಾಲೆಗಳಿಗೆ ತಡವಾಗಿ ಬಂದಿದೆ. ಪರೀಕ್ಷೆಯ ಸಮಯದಲ್ಲಿ ವಿತರಿಸುವುದು  ಸರಿಯಲ್ಲ ಎಂಬ ಕಾರಣಕ್ಕೆ ಅವುಗಳನ್ನು ಹಾಗೇ ಇಡಲಾಗಿತ್ತು. 2013-14ನೇ ಸಾಲಿನ ಸಮವಸ್ತ್ರ ಬರುವುದು ತಡವಾಗುವ ಸಾಧ್ಯತೆ ಇದ್ದು, ಶಾಲೆಯ  ಆರಂಭದ ದಿನವೇ ಮಕ್ಕಳಿಗೆ ವಿತರಿಸುತ್ತಿದ್ದೆೀವೆ     ಎಂದು ಕೆ.ಶೆಟ್ಟಹಳ್ಳಿ ಸರ್ಕಾರಿ ಹಿರಿಯ     ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚನ್ನೇಗೌಡ ತಿಳಿಸಿದರು.

ಬಾರದ ಪಠ್ಯ ಪುಸ್ತಕ: ಒಂದನೇ ತರಗತಿಯ ಗಣಿತ, ಪರಿಸರ ಪಠ್ಯ ಪುಸ್ತಕ ಮಾತ್ರ ಬಂದಿದೆ. 2ನೇ ತರಗತಿಯ ಕನ್ನಡ, 3ನೇ ತರಗತಿಯ ಕನ್ನಡ ಮತ್ತು ಪರಿಸರ, 4ನೇ ತರಗತಿಯ ಇಂಗ್ಲಿಷ್, 6ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ಪಠ್ಯ ಪುಸ್ತಕಗಳು ಇನ್ನೂ ಬಂದಿಲ್ಲ. ಬೇಗ ತರಿಸುವಂತೆ ಅಧಿಕಾರಿಗಳನ್ನು ಕೋರಲಾಗಿದೆ.

ಶಾಲಾ ದಾಖಲಾತಿ ಹೆಚ್ಚಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರ ಜತೆಗೂಡಿ ಶನಿವಾರದಿಂದ 5 ದಿನಗಳವರೆಗೆ ಜಾಥಾ ನಡೆಸಲು ಉದ್ದೇಶಿ ಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.