ADVERTISEMENT

ಶ್ರೀರಂಗಪಟ್ಟಣ ದಸರಾ: ಅಂಬಾರಿ ಜತೆ 40 ಕಲಾ ತಂಡಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:15 IST
Last Updated 19 ಅಕ್ಟೋಬರ್ 2012, 8:15 IST

ಶ್ರೀರಂಗಪಟ್ಟಣ: ಅ.20ರಂದು ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಮೆರವಣಿಗೆಯಲ್ಲಿ ಅಂಬಾರಿಯ ಜತೆಗೆ 40 ವಿವಿಧ ಕಲಾ ತಂಡಗಳು ಸಾಗಲಿವೆ ಎಂದು ಜಿಲ್ಲಾಧಿಕಾರಿ ವಿ.ಎನ್.ಕೃಷ್ಣಯ್ಯ ತಿಳಿಸಿದರು.

  ಅಂದು ಮಧ್ಯಾಹ್ನ 3 ಗಂಟೆಗೆ ಕಿರಂಗೂರು ಬಳಿಯ ದಸರಾ ಬನ್ನಿಮಂಟಪದ ಬಳಿ ಹಿರಿಯ ರಂಗನಟಿ ಡಾ.ಬಿ.ಜಯಶ್ರೀ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬನ್ನಿಮಂಟಪದಿಂದ ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತ ಜಂಬೂ ಸವಾರಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪಟ್ಟಣಕ್ಕೆ ಬರಲಿದೆ. ಪಟ್ಟಣದ ಮಸೀದಿ ಮುಂದಿನ ರಸ್ತೆಯಲ್ಲಿ ಹಾದು, ಮುಖ್ಯ ಬೀದಿಯ ಮೂಲಕ ರಂಗನಾಥಸ್ವಾಮಿ ದೇವಾಲಯ ತಲುಪಲಿದೆ ಎಂದರು.

  ಅಂಬಾರಿಯ ಜತೆಗೆ ಅಶ್ವದಳ, ಪೊಲೀಸ್ ಬ್ಯಾಂಡ್, ನಂದಿ ಧ್ವಜ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಮರಗಾಲು, ಗಾರುಡಿ ಗೊಂಬೆ, ಸೋಮನ ಕುಣಿತ, ಕಂಸಾಳೆ, ಹುಲಿವೇಷ, ನಾಸಿಕ್ ಡೋಲು, ದೊಣ್ಣೆ ವರಸೆ, ಜಡೆ ಕೋಲಾಟ, ಪಟದ ಕುಣಿತ, ಒನಕೆ ಕುಣಿತ, ವೀರಭದ್ರ ಕುಣಿತ, ಕೊಂಬು- ಕಹಳೆ, ಸ್ಕೌಟ್ ಇತರ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ಹೇಳಿದರು.

4 ಆನೆಗಳು: ದಸರಾ ಮೆರವಣಿಗೆಯಲ್ಲಿ 4 ಆನೆಗಳು ಭಾಗವಹಿಸಲಿವೆ. ಅಭಿಮನ್ಯು ಕಳೆದ ವರ್ಷದಂತೆ ಈ ಬಾರಿ ಕೂಡ ಚಾಮುಂಡೇಶ್ವರಿಯ ವಿಗ್ರಹ ಹೊತ್ತು ಎರಡೂವರೆ ಕಿ.ಮೀ ದೂರ ಸಾಗಲಿದೆ. ವಿಕ್ರಂ, ಹರ್ಷ ಹಾಗೂ ಕಾಂತಿ ಹೆಸರಿನ ಆನೆಗಳು ಅಭಿಮನ್ಯು ಜತೆಯಲ್ಲಿ ಹೆಜ್ಜೆ ಹಾಕಲಿವೆ. ವಿವಿಧ ಸ್ತಬ್ಧ ಚಿತ್ರಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ.ಜಯಣ್ಣ, ಉಪ ವಿಭಾಗಾಧಿಕಾರಿ ಲತಾ, ಎಸ್ಪಿ ಕೌಶಲೇಂದ್ರಕುಮಾರ್, ಹೆಚ್ಚುವರಿ ತಹಶೀಲ್ದಾರ್ ಪದ್ಮಮ್ಮ ಇತರರು ಇದ್ದರು.

ಶನಿವಾರದ ಕಾರ್ಯಕ್ರಮ: ಅ.20ರಂದು ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದ ಶ್ರೀರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಉಪಮುಖ್ಯಮಂತ್ರಿ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್, ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಪಾಲ್ಗೊಳ್ಳಲಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಶ್ರೀರಂಗ ವೇದಿಕೆ ಪಕ್ಕದಲ್ಲಿ ಕರಕುಶಲ ವಸ್ತುಪ್ರದರ್ಶನ, ಛಾಯಾಚಿತ್ರ ಪ್ರದರ್ಶನ; ಸಂಜೆ 7ಕ್ಕೆ ಬಾಣ ಬಿರುಸುಗಳ ಪ್ರದರ್ಶನ ಇರುತ್ತದೆ. 7.30ಕ್ಕೆ ಕಿರುತೆರೆ ನಟರಾದ ನಮಿತಾರಾವ್ ಹಾಗೂ ವಿಕ್ರಂ ಸೂರಿ ತಂಡದಿಂದ `ಗಣೇಶ ವೈಭವ~ ನೃತ್ಯ ರೂಪಕ, ರಾತ್ರಿ 8 ಗಂಟೆಗೆ ನಾಗಪುರದ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ ಕಲಾವಿದರಿಂದ `ಫುಂಗ್ ಜೋಲಮ್~ ಮಣಿಪುರಿ ನೃತ್ಯ; 8.45ಕ್ಕೆ ಚಲನಚಿತ್ರ ನಟಿಯರಾದ ಪೂರ್ವಿ ಮತ್ತು ಪ್ರಜ್ಞಾ ತಂಡದಿಂದ `ನೃತ್ಯ ವೈಭವ~ ಹಾಗೂ 9.15ಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ `ಕನ್ನಡ ಡಿಂಡಿಮ~ ಸಂಗೀತ ರಸಸಂಜೆ ಪ್ರದರ್ಶನ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.