ಮದ್ದೂರು: ಸಮೀಪದ ಹೆಮ್ಮನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿಯ ಕೊಂಡೋತ್ಸವ ಹಾಗೂ ದಿವ್ಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು.
ಬೆಳಗಿನ ಜಾವ 4ಗಂಟೆಗೆ ಚೌಡೇಶ್ವರಿ ದೇವಿಯ ಕೊಂಡೋತ್ಸವ ಭಕ್ತರ ಶ್ರದ್ಧಾಭಕ್ತಿಯ ಉದ್ಘೋಷಗಳ ನಡುವೆ ಜರುಗಿತು. ದೇವಿಯ ಕರಗ ಹೊತ್ತ ಅರ್ಚಕರು ನಿಗಿ ನಿಗಿ ಕೆಂಡ ಹಾಯುವ ಮೂಲಕ ನೆರೆದಿದ್ದ ಜನರಲ್ಲಿ ಸಂಚಲನ ಮೂಡಿಸಿದರು. ಈ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡ ಅರ್ಚಕ ಸಂತೋಷ್ ಎಂಬುವರು ಕೊಂಡ ಹಾಯುವಾಗ ಕೊನೆಯಲ್ಲಿ ಮುಗ್ಗುರಿಸಿ ಬಿದ್ದು ಗಾಯಗೊಂಡರು. ಕೂಡಲೇ ಭಕ್ತರು ಅವರನ್ನು ಕೊಂಡದಿಂದ ಹೊರಗೆಳೆದುಕೊಂಡು ಹೆಚ್ಚಿನ ಅನಾಹುತ ತಪ್ಪಿಸಿದರು.
ಮಧ್ಯಾಹ್ನ 12.30ರ ವೇಳೆಗೆ ದೇಗುಲ ಆವರಣದಲ್ಲಿ ಶ್ರೀ ಚೌಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರು `ಉಘೇ ಉಘೇ ಚೌಡೇಶ್ವರಿ~ ಘೋಷಣೆ ಮೂಲಕ ರಥವನ್ನು ಸಂಭ್ರಮದಿಂದ ಎಳೆಯುವ ಮೂಲಕ ಪುನೀತರಾದರು.
ನಂತರ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಬಾಯಿಬೀಗ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಿದರು. ರಾತ್ರಿ12ಗಂಟೆ ವೇಳೆಗೆ ನಂದಾದೀಪದೊಂದಿಗೆ, ಎಳನೀರಿನಿಂದ ಕಲೆಸಿದ ಅಮೃತಮಣ್ಣಿನಿಂದ ದೇವಿಯ ಗರ್ಭಗುಡಿಯ ಮಹಾದ್ವಾರವನ್ನು ಮುಚ್ಚುವ ಮೂಲಕ ಜಾತ್ರೆಗೆ ಅಂತಿಮ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.