ADVERTISEMENT

ಸಂವಾದಕ್ಕೆ ಸ್ಪಂದಿಸದ ಜನತೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 5:50 IST
Last Updated 31 ಆಗಸ್ಟ್ 2011, 5:50 IST
ಸಂವಾದಕ್ಕೆ ಸ್ಪಂದಿಸದ ಜನತೆ: ಅಸಮಾಧಾನ
ಸಂವಾದಕ್ಕೆ ಸ್ಪಂದಿಸದ ಜನತೆ: ಅಸಮಾಧಾನ   

ಶ್ರೀರಂಗಪಟ್ಟಣ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ `ಜನ ಸಂವಾದ~ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

  ಕರ್ನಾಟಕ ಆರೋಗ್ಯ ವ್ಯವಸ್ಥೆ ಸುಧಾರಣೆ ಮತ್ತು ಅಭಿವೃದ್ಧಿ ಯೋಜನೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಧ್ಯಯನ ವಿದ್ಯಾ ಟ್ರಸ್ಟ್ ಕಾರ್ಯಕ್ರಮ ಆಯೋಜಿಸಿದ್ದವು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಸರ್ಕಾರದ ಮಹತ್ವದ ಯೋಜನೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಳ್ಳದ ಕಾರಣಕ್ಕೆ ಅಸಹನೆ ವ್ಯಕ್ತಪಡಿಸಿದರು. ಸರ್ಕಾರದ ಇಂತಹ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಪ್ರಚಾರ ನೀಡಬೇಕು. ಕೇವಲ ಆಹ್ವಾನ ಪತ್ರಿಕೆಗೆ ಕಾರ್ಯಕ್ರಮ ಸೀಮಿತವಾಗಬಾರದು.

ಜನರಿಗೆ ಮಾಹಿತಿ ಇಲ್ಲದೆ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ಇಂತಹ ಅಧ್ವಾನಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ ಅವರಿಗೆ ತಾಕೀತು ಮಾಡಿದರು.

ಜಿ.ಪಂ. ಸದಸ್ಯರು ಹಾಗೂ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕಾರ್ಯಕ್ರಮದಲ್ಲಿ ಜನರಿಗಿಂತ ಖಾಲಿ ಕುರ್ಚಿಗಳೇ ಹೆಚ್ಚಾಗಿದ್ದವು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ ಮಾತನಾಡಿ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿಗಳು ಸರ್ಕಾರದ ನೆರವಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಶ್ರೀಧರ್ ಮಾತನಾಡಿದರು. ಜಿಲ್ಲಾ ಸಂಯೋಜಕ ಬಿ.ಸ್ವಾಮಿ, ಶ್ರೀನಿವಾಸ್, ಅರಕೆರೆ ಮುನಿಸ್ವಾಮಿ, ಟಿ.ಎಂ.ನಾಗರಾಜು, ತಾಲ್ಲೂಕು ಸಂಯೋಜಕ ಶ್ರೀಕಾಂತ್ ಶರ್ಮಾ, ಗುರುಸಿದ್ದಯ್ಯ, ಶೇಖರ್, ಸಿದ್ದರಾಜು, ಶೇಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.