ADVERTISEMENT

ಸಂಸತ್ತಿಗೂ ಸಿನಿಮಾಕ್ಕೂ ಬಿಡದ ನಂಟು

ಬಸವರಾಜ ಹವಾಲ್ದಾರ
Published 17 ಮಾರ್ಚ್ 2014, 10:53 IST
Last Updated 17 ಮಾರ್ಚ್ 2014, 10:53 IST

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೂ ಚಲನಚಿತ್ರರಂಗಕ್ಕೂ ಬಿಡಿಸಲಾಗದ ನಂಟಿದೆ. 1984ರ ಚುನಾವಣೆಯಿಂದ ಆರಂಭವಾಗಿರುವ ನಂಟು ಇಂದಿಗೂ ಮುಂದುವರಿದಿದೆ.

1984ರಲ್ಲಿ ಸಂಸದರಾಗಿದ್ದ ಕೆ.ವಿ. ಶಂಕರೇಗೌಡ ಅವರು ಚಲನಚಿತ್ರ ನಿರ್ಮಾಪಕರಾಗಿದ್ದರು. ಆ ನಂತರದಲ್ಲಿ ಸಂಸದರಾಗಿದ್ದ ಜಿ. ಮಾದೇಗೌಡ ಅವರು, ಅಂಬರೀಷ್‌ ನಟಿಸಿದ್ದ ‘ಮಂಡ್ಯದ ಗಂಡು‘ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಚಲನಚಿತ್ರ ರಂಗದಲ್ಲಿ ‘ರೆಬೆಲ್‌ ಸ್ಟಾರ್‌’ ಎಂದೇ ಗುರುತಿಸಿಕೊಂಡಿರುವ ಅಂಬರೀಷ್‌, 1998ರಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ‘ಹ್ಯಾಟ್ರಿಕ್‌’ ಬಾರಿಸಿದರು. ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಎನ್‌. ಚೆಲುವರಾಯಸ್ವಾಮಿ ಅವರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. 2009ರಲ್ಲಿ ಸಂಸದರಾದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಆದಿಚುಂಚನಗಿರಿ ಮಹಾತ್ಮೆ’ ಚಲನಚಿತ್ರದ ಮೂಲಕ ಅವರೂ ನಟರಾದರು. 

ದಶಕಗಳ ಕಾಲ ಚಲನಚಿತ್ರ ರಂಗದಲ್ಲಿದ್ದ ನಟಿ ರಮ್ಯಾ ಅವರು 2013ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವನ್ನೂ ಸಾಧಿಸಿದರು.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಾಲಿ ಸಂಸದೆ ರಮ್ಯಾ ಅವರೇ ಅಭ್ಯರ್ಥಿಯಾಗುವುದು ಹೆಚ್ಚೂ ಕಡಿಮೆ ಖಚಿತ ಎಂಬ

ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಚಲನಚಿತ್ರರಂಗದವರನ್ನು ಮಂಡ್ಯ ಕ್ಷೇತ್ರದ ಜನರು ಆಯ್ಕೆ ಮಾಡುವುದನ್ನೇ ಮಾನದಂಡವಾಗಿಸಿಕೊಂಡು ನಟಿ ರಕ್ಷಿತಾ ಅವರು, ‘ಮಂಡ್ಯದ ಸೊಸೆಯಾಗಿರುವ ನಾನೂ ಸ್ಪರ್ಧಿಸುತ್ತೇನೆ’ ಎನ್ನುತ್ತಾರೆ. ಈ ನಡುವೆ ಬಿಜೆಪಿಯಿಂದ ನಟ ಉಪೇಂದ್ರ ಅವರನ್ನು ಕರೆತರುವ ಯತ್ನಗಳು ನಡೆದಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ, ಖಚಿತವಾಗಿಲ್ಲ.

ಇತಿಹಾಸ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಘಟಾನುಘಟಿ ನಾಯಕರುಗಳೇ ಆಯ್ಕೆಯಾದ ಇತಿಹಾಸವಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಜಿ. ಮಾದೇಗೌಡ, ವಸತಿ ಸಚಿವರಾಗಿರುವ ಅಂಬರೀಷ್‌, ವಿಧಾನಸಭಾ ಸ್ಪೀಕರ್‌ ಆಗಿದ್ದ ಕೆ.ಆರ್‌. ಪೇಟೆ ಕೃಷ್ಣ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಸತತವಾಗಿ ನಾಲ್ಕು ಬಾರಿ ಎಂ.ಕೆ. ಶಿವನಂಜಪ್ಪ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ವಸತಿ ಸಚಿವ ಅಂಬರೀಷ್   ತಲಾ ಮೂರು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.

ಸಂಸದರಾಗಿದ್ದ ಎಂ.ಕೆ. ಶಿವನಂಜಪ್ಪ ಅವರ ನಿಧನದಿಂದ 1968ರಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್‌ ಪಾರ್ಟಿಯಿಂದ  (ಪಿಎಸ್‌ಪಿ) ಕಣಕ್ಕೆ ಇಳಿದ ಎಸ್‌.ಎಂ. ಕೃಷ್ಣ ಆಯ್ಕೆಯಾದರು. ಈ ಮೂಲಕ ಕಾಂಗ್ರೆಸ್‌ಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದರು.

1972ರಲ್ಲಿ ಡಿ. ದೇವರಾಜು ಅರಸು ಅವರು ಎಸ್‌.ಎಂ. ಕೃಷ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದರಿಂದ ತೆರವಾದ ಲೋಕಸಭಾ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕೆ. ಚಿಕ್ಕಲಿಂಗಯ್ಯ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT