ADVERTISEMENT

ಸಮಸ್ಯೆಗಳಿಂದ ನಲುಗಿದ ನಲ್ಲಹಳ್ಳಿ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:26 IST
Last Updated 25 ಸೆಪ್ಟೆಂಬರ್ 2013, 8:26 IST
ನಲ್ಲಹಳ್ಳಿ ಗ್ರಾಮದಲ್ಲಿನ ತಿಪ್ಪೆಗುಂಡಿಗಳ ರಾಶಿ.
ನಲ್ಲಹಳ್ಳಿ ಗ್ರಾಮದಲ್ಲಿನ ತಿಪ್ಪೆಗುಂಡಿಗಳ ರಾಶಿ.   

ಪಾಂಡವಪುರ: ತಾಲ್ಲೂಕಿನ ಕೊನೆಯ ಭಾಗದಲ್ಲಿರುವ ನಲ್ಲಹಳ್ಳಿ ಗ್ರಾಮವು ಕುಡಿಯುವ ನೀರು, ರಸ್ತೆ, ಚರಂಡಿ, ಶುಚಿತ್ವ, ಬಸ್‌ ಸಂಚಾರ ಹಾಗೂ ಇನ್ನಿತರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 1,500 ರಷ್ಟು ಜನಸಂಖ್ಯೆ ಹೊಂದಿರುವ ನಲ್ಲಹಳ್ಳಿ ಗ್ರಾಮದ ಅಭಿವೃದ್ಧಿಗೆ ಇದುವರೆಗಿನ ಜನಪ್ರತಿನಿಧಿಗಳಾಗಲೀ, ಅಧಿಕಾರಿ­ಗಳಾಗಲೀ ಗಮನ ಹರಿಸಿದಂತಿಲ್ಲ.

ಈ ಗ್ರಾಮದ ಜನರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು, ವಾರಕ್ಕೆ ಎರಡು ಬಾರಿ ಮಾತ್ರ ನೀರು ದೊರೆಯುತ್ತಿದೆ. 1994–95ರಲ್ಲಿ ನೀರಿನ ಶೇಖರಣೆಗಾಗಿ ನಿರ್ಮಿಸಲಾಗಿ­ರುವ ಏಕೈಕ ಟ್ಯಾಂಕ್‌ನಿಂದ ಪಕ್ಕದ ಈರೇಗೌಡನಕೊಪ್ಪಲು ಗ್ರಾಮಕ್ಕೂ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿನ ಏಕೈಕ ಕೊಳವೆ ಬಾವಿಯಿಂದ ಟ್ಯಾಂಕ್‌ಗೆ ನೀರನ್ನು ಶೇಖರಿಸಲಾಗುತ್ತಿದೆ.

ರಸ್ತೆಗಳು ಸರಿಯಿಲ್ಲ: ಗ್ರಾಮದೊಳಗಿನ ಬೀದಿಗಳೆಲ್ಲವೂ ಕಲ್ಲುಮಣ್ಣು, ಗುಂಡಿಗಳಿಂದ ಕೂಡಿದ್ದು, ವ್ಯವಸ್ಥಿತವಾದ ರಸ್ತೆಗಳಿಲ್ಲ. ಊರಿನ ಜನರು ತಾಲ್ಲೂಕು ಕೇಂದ್ರ ಹಾಗೂ ಇನ್ನಿತರ ಕಡೆಗಳಿಗೆ ಹೋಗಬೇಕಾದ ಸುಂಕಾತೊಣ್ಣೂರು ಗ್ರಾಮದವರೆಗಿನ ರಸ್ತೆ ಇದುವರೆಗೂ ಡಾಂಬರೀಕರಣ ಕಂಡಿಲ್ಲ.

ಚಿಕ್ಕಬ್ಯಾಡರಹಳ್ಳಿಯಿಂದ ಕಾಳೇನಹಳ್ಳಿ ಮಾರ್ಗವಾಗಿ ನಲ್ಲಹಳ್ಳಿ ಮೂಲಕ ಹಾದುಹೋಗುವ ರಸ್ತೆ­ಯನ್ನು ‘ನಮ್ಮ ಊರು–ನಮ್ಮ ರಸ್ತೆ‘ ಯೋಜನೆಯಲ್ಲಿ ನಿರ್ಮಾಣ­ವಾಗು­ತ್ತಿರುವ ರಸ್ತೆಯ ಕಾಮಗಾರಿಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

ವ್ಯವಸ್ಥಿತವಾದ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಅಕ್ಕಪಕ್ಕದಲ್ಲಿಯೇ ತಿಪ್ಪೆಗುಂಡಿಗಳು ರಾಶಿ ರಾಶಿ ಇದ್ದು ಇದರ ವಿಲೇವಾರಿಯಾಗಬೇಕಾಗಿದೆ. ಗ್ರಾಮಕ್ಕೆ ಸರಿಯಾದ ಬಸ್‌ ಸೌಲಭ್ಯವಿಲ್ಲ.

ಶಾಲೆಯ ಸುತ್ತ ಅಶುಚಿತ್ವ: ಗ್ರಾಮ­ದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ­ಯಿದ್ದು 1 ರಿಂದ 5ರವರೆಗೆ ತರಗತಿ ನಡೆಯುತ್ತಿದೆ. 2011–12ನೇ ಸಾಲಿನಲ್ಲಿ ಎಂಎನ್‌ಆರ್‌ಇಜಿಎ ಯೋಜನೆಯಲ್ಲಿ ರೂ 1ಲಕ್ಷ ಅಂದಾಜಿನಲ್ಲಿ ಶಾಲೆಯಲ್ಲಿ ಕಾಂಪೌಂಡ್‌ ನಿರ್ಮಿಸಲಾಗಿದ್ದರೂ ಪೂರ್ಣ­ಗೊಂಡಿಲ್ಲ. ಶಾಲೆಯ ಹಿಂಭಾಗದಲ್ಲಿ ಕಾಂಪೌಂಡ್‌ ನಿರ್ಮಾಣಗೊಳ್ಳದ ಕಾರಣ ಗಿಡಗಂಟಿಗಳು ಬೆಳೆದು­ಕೊಂಡಿವೆ. ಕೆಲವು ಜನರು ಇಲ್ಲಿಯೇ ಮಲ ಮೂತ್ರ ಮಾಡುತ್ತಿರುವುದರಿಂದ ಮಕ್ಕಳು ಗಬ್ಬು ವಾಸನೆಯಲ್ಲಿಯೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಶಾಲೆಯ ಆವರಣದಲ್ಲಿರುವ ಶೌಚಾಲಯಕ್ಕೆ ಬೀಗ ಜಡಿದಿದ್ದು, ಕಲ್ಲು ಮುಳ್ಳುಗಳನ್ನು ಹಾಕಿರುವುದರಿಂದ ಮಕ್ಕಳು ಶೌಚಾಲಯ ಬಳಸ­ಲಾಗುತ್ತಿಲ್ಲ.

‘ನಮ್ಮೂರು ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ. ರಸ್ತೆ, ಚರಂಡಿ, ಬಸ್, ಯಾವ ನಾಗರಿಕ ಸೌಕರ್ಯಗಳು ದೊರೆಯುತ್ತಿಲ್ಲ. ತಾಲ್ಲೂಕಿನ ಗಡಿ ಭಾಗದಲ್ಲಿರುವ ನಮ್ಮ ಗ್ರಾಮವನ್ನು ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ’ ಎಂದು ಮುಖಂಡರಾದ ಮಂಚೇಗೌಡ ಮತ್ತು ಸಣ್ಣಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.