ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಬಿಂಡೇನಹಳ್ಳಿ

ಎನ್.ಆರ್.ದೇವಾನಂದ್
Published 3 ಜುಲೈ 2013, 7:42 IST
Last Updated 3 ಜುಲೈ 2013, 7:42 IST

ನಾಗಮಂಗಲ: ರಸ್ತೆ, ಚರಂಡಿ, ಶಾಲೆಯ ಶೌಚಾಲಯ ಸೇರಿದಂತೆ ಹಲವು ಸಮಸ್ಯೆಗಳು ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮಸ್ಥರನ್ನು ಕಾಡುತ್ತಿವೆ.

ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮನೆಗಳಿವೆ. ಒಂದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಮೌಲ ಸೌಲಭ್ಯಗಳು ಮಾತ್ರ ಅವರನ್ನು ತಲುಪಿಲ್ಲ.
ಗ್ರಾಮದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ ನೀರಿನ ಶೇಖರಣೆ ಪ್ರಮಾಣದಲ್ಲಿ ಕುಸಿತವಾಗಿದೆ. ಹೂಳೆತ್ತಿಸುವಂತೆ ಹಲವಾರು ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕೃಷಿಯ ಜತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಇಲ್ಲಿನ ಗ್ರಾಮಸ್ಥರು. 450ಕ್ಕೂ ಹೆಚ್ಚು ಜಾನುವಾರುಗಳಿವೆ. ಆಗಾಗ ಜಾನುವಾರುಗಳಿಗೆ ಎದುರಾಗುವ ತೊಂದರೆಯನ್ನು ಬಗೆಹರಿಸಲು ಪಶು ಆಸ್ಪತ್ರೆಯೊಂದನ್ನು ಆರಂಭಿಸಬೇಕು ಎಂಬ ಕೋರಿಕೆಯೂ ಈಡೇರಿಲ್ಲ.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಪರಿಣಾಮ ಮನೆಯ ತ್ಯಾಜ್ಯ ನೀರು ಮನೆಗಳ ಮುಂದೆ ಹರಿಯುವುದರಿಂದ ಅಲ್ಲಲ್ಲಿ ರಸ್ತೆಯ ಮಧ್ಯೆಯೇ ಚರಂಡಿ ನಿರ್ಮಾಣವಾಗಿದೆ. ಸಂಚಾರಕ್ಕೂ ತೊಂದರೆಯಾಗುತ್ತದೆ. ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಗ್ರಾಮದಿಂದ ನಾಗಮಂಗಲಕ್ಕೆ ಸಂಪರ್ಕಿಸುವ ರಸ್ತೆ ಸರಿಯಾಗಿಲ್ಲ. ಅಂಗನವಾಡಿಯ ಮಕ್ಕಳ ಹಾಜರಾತಿ ಚೆನ್ನಾಗಿದೆ. ಆದರೆ, ಶೌಚಾಲಯದ ವ್ಯವಸ್ಥೆ ಇಲ್ಲ. ಅಂಗನವಾಡಿಯು ದೇವಾಲಯದ ಪಕ್ಕದಲ್ಲಿಯೇ ಇರುವುದರಿಂದ ಮಕ್ಕಳು ಬಹಿರ್ದೆಸೆಗೆ ದೂರ ಹೋಗಬೇಕು.

ವಿದ್ಯುತ್ ಪರಿವರ್ತಕ ಆಗಾಗ ಸುಡುತ್ತಲೇ ಇರುತ್ತದೆ. ಆಗ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೇಟ್ ಇಲ್ಲ, ಶೌಚಾಲಯದ ಕಾಮಗಾರಿ 6 ತಿಂಗಳ ಅವಧಿಯಿಂದ ಅರ್ಧಕ್ಕೆ ನಿಂತು ಹೋಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಪಂದಿಸಬೇಕು ಎನ್ನುವುದು ಅವರ ಆಗ್ರಹ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.