ADVERTISEMENT

ಸವರ್ಣೀಯರ ವಿರುದ್ಧ ಆಕ್ರೋಶ; ರಸ್ತೆ ತಡೆ

ದಲಿತ ಮಹಿಳೆ ಶವ ಸಂಸ್ಕಾರಕ್ಕೆ ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 5:11 IST
Last Updated 14 ಫೆಬ್ರುವರಿ 2014, 5:11 IST
ಶವ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎಂದು ಮಂಡ್ಯ ತಾಲ್ಲೂಕಿನ ಬಿ. ಹಟ್ನ ಗ್ರಾಮದ ದಲಿತರು ಜಕ್ಕನಹಳ್ಳಿ–ಮಂಡ್ಯ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಶವ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎಂದು ಮಂಡ್ಯ ತಾಲ್ಲೂಕಿನ ಬಿ. ಹಟ್ನ ಗ್ರಾಮದ ದಲಿತರು ಜಕ್ಕನಹಳ್ಳಿ–ಮಂಡ್ಯ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.   

ಮಂಡ್ಯ: ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎಂದು ಮೂರು ಗಂಟೆಗೂ ಹೆಚ್ಚು ಕಾಲ ಶವವಿಟ್ಟುಕೊಂಡು ಜಕ್ಕನಹಳ್ಳಿ–ಮಂಡ್ಯ ಮಾರ್ಗದಲ್ಲಿ ರಸ್ತೆ ತಡೆ ನಡೆಸಿದ ಘಟನೆ ತಾಲ್ಲೂಕಿನ ಬಿ. ಹಟ್ನದಲ್ಲಿ ನಡೆದಿದೆ.

ಹಲವಾರು ವರ್ಷಗಳಿಂದ ಅಂತ್ಯಕ್ರಿಯೆ ನಡೆಸುತ್ತಿದ್ದ ಸ್ಮಶಾನದಲ್ಲಿ ದಲಿತರು ಶವ ಸಂಸ್ಕಾರಕ್ಕೆ ಮುಂದಾದಾಗ
ಸವರ್ಣೀಯರು ತಡೆದು, ಈಗಾಗಲೇ ಸರ್ಕಾರದ ವತಿಯಿಂದ ಸ್ಮಶಾನ ಜಾಗವನ್ನು ಗುರುತಿಸಲಾಗಿದೆ. ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು ಎಂದು ಹೇಳಿದರು.

ಇದಕ್ಕೆ ಒಪ್ಪದ ದಲಿತರು, ಸರ್ಕಾರಿ ಅಧಿಕಾರಿಗಳು ಸರ್ವೆ ಸಂಖ್ಯೆ ಹೇಳಿದ್ದಾರೆ. ಎಲ್ಲಿ ಎಂದು ಸರಿಯಾಗಿ ತೋರಿಸಿಲ್ಲ. ಅಲ್ಲಿಗೆ ಹೋಗಲು ದಾರಿ ಮಾಡಿಲ್ಲ. ಆದ್ದರಿಂದ ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು  ಪಟ್ಟು ಹಿಡಿದರು. ಎರಡೂ ಗುಂಪುಗಳ ನಡುವೆ ಮಾತಿನ ವಾಗ್ವಾದ ನಡೆಯಿತು.

ಬುಧವಾರ ರಾತ್ರಿ ನಿಧನರಾಗಿದ್ದ ಹೇಮಾ ಎಂಬುವವರ ಶವದೊಂದಿಗೆ ಜಕ್ಕನಹಳ್ಳಿ– ಮಂಡ್ಯ ರಸ್ತೆಗೆ ಬಂದ ದಲಿತರು, ವಾಹನ ಸಂಚಾರ ತಡೆದು ಪ್ರತಿಭಟನೆ ಆರಂಭಿಸಿದರು. ರಸ್ತೆ ಮಧ್ಯೆಯೇ ಬೆಂಕಿ ಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡೂ ಗುಂಪಿನ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಆದರೆ, ಪ್ರಯೋಜನವಾಗಿಲಿಲ್ಲ. ಪ್ರತಿಭಟನೆ ಮುಂದುವರಿದಿತ್ತು.

ತಹಶೀಲ್ದಾರ್ ಡಾ.ಮಮತಾ ಬಂದ ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಯಿತು. ಆಗ ಅಲ್ಲಿಯೇ ಇರುವ ಗುಂಡು ತೋಪಿನಲ್ಲಿ ಅಂತ್ಯಕ್ರಿಯೆ ಮಾಡಲು ಒಪ್ಪಿಕೊಂಡಿದ್ದರಿಂದ ಸಮಸ್ಯೆಗೆ ಪರಿಹಾರ ದೊರೆಯಿತು.

ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ಸರ್ಕಾರ ಜಾಗದಲ್ಲಿ ಸ್ಮಶಾನವಿದೆ. ದೂರ ಎನ್ನುವ ಕಾರಣಕ್ಕೆ ಹಲವಾರು ವರ್ಷಗಳಿಂದ ಅಂತ್ಯಕ್ರಿಯೆ ಮಾಡುತ್ತಿದ್ದ ಖಾಸಗಿಯವರ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಇದಕ್ಕೆ ಜಾಗದವರು ವಿರೋಧ ವ್ಯಕ್ತಪಡಿಸಿದ್ದರು. ಗುಂಡು ತೋಪಿನಲ್ಲಿ ಅಂತ್ಯಕ್ರಿಯೆ ಮಾಡಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಗ್ರಾಮಕ್ಕೆ ಸಮೀಪದ ಭೂಮಿ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದೇವೆ. ಸರ್ಕಾರದಿಂದ ಆ ಭೂಮಿಗೆ ಪರಿಹಾರ ನೀಡಲಾಗುವುದು. ಸ್ಮಶಾನದ ಸಮಸ್ಯೆಯೂ ಬಗೆಹರಿಯಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.